ಕಬಡ್ಡಿಯಲ್ಲಿ ಏಕಲವ್ಯ ಪ್ರಶಸ್ತಿ ಪಡೆದ ಜಿಲ್ಲೆಯ ಮೊದಲ ಆಟಗಾರ ಇನ್ನಿಲ್ಲ!!ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ ಉದಯ ಚೌಟ

ಕಬಡ್ಡಿ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದು ಏಕಲವ್ಯ ಪ್ರಶಸ್ತಿ ಪಡೆದ ಜಿಲ್ಲೆಯ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ಖ್ಯಾತ ಕಬಡ್ಡಿ ಆಟಗಾರ ಬಂಟ್ವಾಳ ತಾಲೂಕಿನ ಮಾಣಿ ಬದಿಗುಡ್ಡೆ ನಿವಾಸಿ ಉದಯ ಚೌಟ ಅನಾರೋಗ್ಯದಿಂದ ಕೊನೆಯುಸಿರೆಳೆದರು.

ಸುಮಾರು 20 ವರ್ಷಗಳ ಕಾಲ ಕಬಡ್ಡಿ ಕಣದಲ್ಲಿ ತನ್ನದೇ ಛಾಪನ್ನು ಮೂಡಿಸಿ,300 ಕ್ಕೂ ಅಧಿಕ ಪಂದ್ಯಗಳನ್ನು ಆಡಿದ್ದ ಚೌಟ 2007ರ ದ್ವಿತೀಯ ವಿಶ್ವಕಪ್ ಕಬಡ್ಡಿಯಲ್ಲಿ ಗೆಲುವು ಸಾಧಿಸಿದ್ದ ತಂಡದಲ್ಲಿಯೂ ಪಾಲು ಪಡೆದಿದ್ದರು.

ಪ್ರಸ್ತುತ ಸುರತ್ಕಲ್ ನಲ್ಲಿರುವ ಬ್ಯಾಂಕ್ ಆಫ್ ಬರೋಡದಲ್ಲಿ ಉದ್ಯೋಗದಲ್ಲಿದ್ದ ಉದಯ್ ಚೌಟ ಅಕಾಲಿಕ ಮರಣಕ್ಕೆ ಕುಟುಂಬಿಕರು, ಕಬಡ್ಡಿ ಪ್ರೇಮಿಗಳು ಕಂಬನಿ ಮಿಡಿದಿದ್ದಾರೆ.

ದೇಶದ ಪ್ರಮುಖ ಕಬಡ್ಡಿ ಆಟಗಾರರಲ್ಲಿ ಒಬ್ಬರಾದ ಉದಯ ಚೌಟ ಬಂಟ್ವಾಳ ತಾಲೂಕಿನ ಮಾಣಿಯ ಬದಿಗುಡ್ಡೆ ನಿವಾಸಿ. 1962-63ರಲ್ಲಿ ದಸರಾ ಕ್ರೀಡಾಕೂಟದಲ್ಲಿ ವಿಜೇತ ಕಬಡ್ಡಿ ತಂಡದಲ್ಲಿದ್ದ ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಪಟುವಾಗಿದ್ದ ದಿ. ವೆಂಕಪ್ಪ ಚೌಟರ ಪುತ್ರನಾಗಿರುವ ಉದಯ ಚೌಟ ಕಬಡ್ಡಿ ಕ್ರೀಡೆಯಲ್ಲಿ ಎಲ್ಲರ ಹುಬ್ಬೇರಿಸುವಂತಹ ಸಾಧನೆ ಮಾಡಿದ್ದಾರೆ.

ಪ್ರಸಕ್ತ ಬ್ಯಾಂಕ್ ಆಫ್ ಬರೋಡದ ಸುರತ್ಕಲ್ ಕಚೇರಿಯಲ್ಲಿ ಉಪ ಪ್ರಬಂಧಕರಾಗಿರುವ ಉದಯ ಚೌಟ ಕ್ರೀಡಾ ಕೋಟದಲ್ಲಿ 8 ತಿಂಗಳ ಕಾಲ ಏರ್ ಇಂಡಿಯಾ ಮತ್ತು 10 ತಿಂಗಳ ಕಾಲ ಕೆಪಿಟಿಸಿಎಲ್ ಉದ್ಯೋಗದಲ್ಲಿದ್ದರು.

ಮಾಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪುತ್ತೂರು ಸರಕಾರಿ ಕಾಲೇಜಿನಲ್ಲಿ ಪಿಯುಸಿ, ಪುತ್ತೂರು ಸಂತ ಫಿಲೋಮಿನ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿರುವ ಇವರು ವಿದ್ಯಾರ್ಥಿ ದೆಸೆಯಿಂದಲೂ ಕ್ರೀಡಾಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದರು. ಪಿಯುಸಿಯಲ್ಲಿ ವಾಲಿಬಾಲ್, ಕಬಡ್ಡಿಯಲ್ಲಿ ಆಸಕ್ತಿ ಹೊಂದಿದ್ದ ಉದಯ ಚೌಟರ ಈ ಸಾಧನೆಗೆ ಬೆನ್ನೆಲುಬಾಗಿದ್ದವರು ಸಂತ ಫಿಲೋಮಿನ ಕಾಲೇಜಿನ ಪ್ರಾಂಶುಪಾಲರಾಗಿದ್ದ ರೆ.ಫಾ. ಫೆಡ್ರಿಕ್ ಮಸ್ಕರೇನ್ಹಸ್, ಇವರಿಗೆ ಕೋಚ್ ಆಗಿ ಬಂದವರು ಹಬೀಬ್ ಕೆ. ಮಾಣಿ. ಇವರಿಬ್ಬರ ಮಾರ್ಗದರ್ಶನದಲ್ಲಿ ಉದಯ ಚೌಟ ಕಬಡ್ಡಿ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರ.

ವಿದ್ಯಾಭ್ಯಾಸ ಮಾಡುತ್ತಿದ್ದಾಗಲೇ ನಾಲ್ಕು ವರ್ಷ ಅಂತರ್ ಕಾಲೇಜು ಕಬಡ್ಡಿ ಪಂದ್ಯಾಟದಲ್ಲಿ ಜಯಗಳಿಸಿದ್ದ ಇವರು ಅಂತರ್ ವಿಶ್ವವಿದ್ಯಾನಿಲಯಕ್ಕೆ ಸೌತ್‌ರೆನ್‌ಗೆ ಮಂಗಳೂರು ವಿವಿಯನ್ನು ಮೂರು ವರ್ಷ ಪ್ರತಿನಿಧಿಸಿದ್ದರು. 1993 ರಲ್ಲಿ ಜ್ಯೂನಿಯರ್ ನ್ಯಾಷನಲ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಇವರು 2000 ದಿಂದ 2008ರವರೆಗೆ ರಾಷ್ಟ್ರೀಯ ತಂಡದಲ್ಲಿದ್ದರು. ಬ್ಯಾಂಕ್ ಒಲಿಂಪಿಯಾಡ್ ತಂಡದ ನಾಯಕನಾಗಿ, ಬ್ಯಾಂಕ್ ಸ್ಪೋರ್ಟ್ಸ್ ಬೋರ್ಡ್ ತಂಡದ ನಾಯಕನಾಗಿ ಕಾರ್ಯನಿರ್ವಹಿಸಿದ ಇವರು ಇದರಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ದ.ಕ ಜಿಲ್ಲೆಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ನ ಸಂಘಟನಾ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿ ಸುತ್ತಿದ್ದಾರೆ.

ಏಕಲವ್ಯ ಪ್ರಶಸ್ತಿ ಪಡೆದ ಜಿಲ್ಲೆಯ ಪ್ರಥಮ ಕಬಡ್ಡಿ ಆಟಗಾರ: 2004ರಲ್ಲಿ ಭಾರತ-ಬಾಂಗ್ಲಾ ಟೆಸ್ಟ್ ಕಬಡ್ಡಿ ಪಂದ್ಯಾಟದಲ್ಲಿ 5 ಪಂದ್ಯಗಳನ್ನು ಜಯಿಸಿ ಚಿನ್ನದ ಪದಕವನ್ನು ಪಡೆದಿದ್ದರು. ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆಗೆ ಕರ್ನಾಟಕ ಸರಕಾರ ನೀಡುವ ಏಕಲವ್ಯ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಥಮ ಬಾರಿಗೆ ಪಡೆದ ಹೆಗ್ಗಳಿಕೆ ಇವರದ್ದು. 20 ವರ್ಷಗಳ ಕಾಲ ಕಬಡ್ಡಿ ಜೀವನದಲ್ಲಿ ಅಖಿಲ ಭಾರತ ಮಟ್ಟದಲ್ಲಿ 100ಕ್ಕೂ ಅಧಿಕ, ರಾಜ್ಯಮಟ್ಟದಲ್ಲಿ 300 ಕ್ಕೂ ಅಧಿಕ ಪಂದ್ಯಾಟಗಳನ್ನು ಇವರು ಆಡಿದ್ದಾರೆ.

Leave A Reply

Your email address will not be published.