ಮಳೆಗಾಲದ ಒಂದು ಸಂಜೆ | ಲೇಖನ : ಕಿಶನ್ ಎಂ.ಪೆರುವಾಜೆ
ಹಗಲು ರಾತ್ರಿ ಒಂದನ್ನೊಂದು ಹಿಂಬಾಲಿಸುವ ತವಕದಲ್ಲಿ ಕಾಲಚಕ್ರ ಬಹಳ ವೇಗವಾಗಿ ಮುಂದೆ ಸಾಗುತ್ತಿರಲು, ಪ್ರತಿವರ್ಷ ಮಳೆ ಬರುವುದು ನಿಶ್ಚಿತವಾದರೂ, ಮೊದಲ ಮಳೆಯ ಆಗಮನಕ್ಕಾಗಿ ಕಾಯುವ ಸಡಗರಕ್ಕೆ ಲೆಕ್ಕವೇನೂ ಇಲ್ಲವೆಂಬಂತೆ ವಟಗುಟ್ಟುವ ಕಪ್ಪೆಯಿಂದ ಹಿಡಿದು ಗದ್ದೆಯಲ್ಲಿ ಬೀಜ ಬಿತ್ತುವ ರೈತನವರೆಗೂ ಪ್ರತಿಯೊಂದು ಜೀವ ಸಂಕುಲಗಳು ಮಳೆಗಾಗಿ ಹಾತೊರೆಯುತ್ತದೆ.
ಝಳಝಳಿಸುವ ಬೇಸಿಗೆಯ ಶಾಖ ದೇವನಾದ ಸೂರ್ಯನಿಗೊಂದು ವಿರಾಮವನ್ನು ಕೊಟ್ಟು, ಇಡೀ ಆಗಸ ಮಳೆ ಮೋಡಗಳಿಂದ ತುಂಬಿಕೊಂಡಾಗ ಕೆರೆ ಬದಿಯ ಕಪ್ಪೆ ರಾಯನಿಗೂ, ಗರಿ ಬಿಚ್ಚಿ ಕುಣಿಯುವ ನವಿಲಿಗೂ ಅತೀವ ಸಂತಸದ ಕ್ಷಣ. ತುಂತುರು ಹನಿಗಳ ಸ್ಪರ್ಶದಿಂದ ಒದ್ದೆಯಾದ ಮಣ್ಣು ಹೊರಸೂಸುವ ಕಂಪಿಗೆ ಸರಿಸಾಟಿ ಎಲ್ಲೂ ಇಲ್ಲ.
ಒಂದೇ ಕೊಡೆಯ ಕೆಳಗೆ ಜೊತೆಯಾಗಿ ನಡೆಯುವ ಪ್ರೇಮಿಗಳಿಗೆ ಮಳೆ ಅಚ್ಚುಮೆಚ್ಚಾದರೆ, ಆಫೀಸ್ ಹೊರಟವರಿಗೆ ಮಳೆಯ ಮೇಲೆ ತುಂಬಾ ಸಿಟ್ಟು. ಜೋರು ಮಳೆಯಿಂದ ಶಾಲೆಗೆ ರಜಾ ಸಿಕ್ಕಾಗ ಮಳೆರಾಯ ಪುಟಾಣಿಗಳ ಮಕ್ಕಳ ಫೇವರೇಟ್ ಆದರೆ, ಒಗೆದು ಹಾಕಿದ ಬಟ್ಟೆ ಒಣಗದಿದ್ದಾಗ ಪಿಸು ಪಿಸು ಬೈಯುವ ಹೆಂಗಸರಿಗೆ ಮಳೆಯೆಂದರೆ ಅಲರ್ಜಿ.
ಮೆಲ್ಲನೆ ಸುರಿವ ಮಳೆ, ತಂಪಾಗಿ ಬೀಸುವ ಗಾಳಿ, ಮನಸ್ಸಿಗೆ ಹತ್ತಿರವಾದ ನಾಲ್ಕು ಸ್ನೇಹಿತರೊಂದಿಗೆ ಬೀದಿ ಬದಿಯ ಬಂಡಿಯಲ್ಲಿ ಬಿಸಿ ಬಿಸಿ ತಿಂಡಿ ತಿನ್ನುವವರಿಗೆ ಮಳೆಯೆಂದರೆ ಬಹಳ ಪ್ರೀತಿ.
ನಮಗೆಲ್ಲ ಜೀವಜಲವೆನ್ನುವ ಉಡುಗೊರೆಯನ್ನು ಪ್ರೀತಿಯಿಂದ ಉಣಬಡಿಸುವ ಮಳೆರಾಯನಿಗೆ ಒಂದು ಸಣ್ಣ ಥ್ಯಾಂಕ್ಸ್ ಕೂಡ ಹೇಳದೆ, ತಮ್ಮ ಕೆಲಸವನ್ನು ಮಾಡಲು ತೊಂದರೆಯಾಗುತ್ತದೆ ಎನ್ನುತ್ತಾ ಹಿಡಿಶಾಪ ಹಾಕುವ ಬದಲು ಹೀಗೇ ಒಂದು ಮಳೆಗಾಲದ ಸಂಜೆ ಮನೆಯ ಅಂಗಳದಲ್ಲಿ ಕೂತು, ಕೈಯಲ್ಲೊಂದು ಕಪ್ ಬಿಸಿ ಬಿಸಿ ಕಾಫೀ, ಬಾಯಾಡಿಸಲು ಅಜ್ಜಿ ಮಾಡಿದ ಗರಿ ಗರಿ ಹಪ್ಪಳ ಇಟ್ಟುಕೊಂಡು ಮಳೆರಾಯನನ್ನು ಸ್ವಾಗತಿಸೋಣ. ನೀವು ಏನಂತೀರಾ?..
ಲೇ- ಕಿಶನ್. ಎಮ್
ಪವಿತ್ರ ನಿಲಯ, ಪೆರುವಾಜೆ.