ಬಂಟ್ವಾಳ : ಎಸ್ ವಿಎಸ್ ಕಾಲೇಜ್ ನಲ್ಲಿ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ | ಸಂಚಾಲಕ ಹಾಗೂ ಪ್ರಾಂಶುಪಾಲರನ್ನು ಎತ್ತಂಗಡಿ ಮಾಡಬೇಕು ಎಂದು ಒತ್ತಾಯ
ಬಂಟ್ವಾಳ : ಎಬಿವಿಪಿ ಸಂಘಟನೆಯ ನೇತೃತ್ವದಲ್ಲಿ ಕಾಲೇಜಿನ ಅವ್ಯವಸ್ಥೆ ಹಾಗೂ ಆಡಳಿತ ಮಂಡಳಿಯ ವಿರುದ್ಧ ಬಂಟ್ವಾಳದ ಎಸ್ ವಿಎಸ್ ಕಾಲೇಜ್ ನಲ್ಲಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ.
ಇತ್ತೀಚೆಗೆ ಮಹಿಳಾ ಪ್ರಾಧ್ಯಾಪಕಿಗೆ ಕಿರುಕುಳ ಕೊಟ್ಟು ಬಂಧನಕ್ಕೊಳಗಾಗಿದ್ದ ಎಸ್ ವಿಎಸ್ ಕಾಲೇಜಿನ ಸಂಚಾಲಕ ಪ್ರಕಾಶ್ ಶೆಣೈಯನ್ನು ಹುದ್ದೆಯಿಂದ ತೆಗೆದು ಹಾಕಬೇಕು. ಆತನಿಗೆ ಬೆಂಬಲ ನೀಡುತ್ತಿರುವ ಕಾಲೇಜಿನ ಪ್ರಾಂಶುಪಾಲರನ್ನೂ ಎತ್ತಂಗಡಿ ಮಾಡಬೇಕು ಎಂದು ಒತ್ತಾಯಿಸಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಪ್ರಕಾಶ್ ಶೆಣೈ ವಿರುದ್ಧ ಮಹಿಳಾ ದೌರ್ಜನ್ಯದ ಪ್ರಕರಣ ದಾಖಲಾಗಿದ್ದು, ಇತ್ತಿಚೆಗೆ ಅವರ ಬಂಧನ ಕೂಡ ಆಗಿತ್ತು. ಆದರೆ, ಜಾಮೀನಿನಲ್ಲಿ ಬಿಡುಗಡೆಯಾಗಿರುವ ಸಂಚಾಲಕರು ಕಾಲೇಜಿನ ಅವ್ಯವಸ್ಥೆಯನ್ನು ಪ್ರಶ್ನಿಸಿದ ವಿದ್ಯಾರ್ಥಿಗಳ ಮೇಲೆ ಪ್ರಾಂಶುಪಾಲರನ್ನು ಮುಂದಿಟ್ಟು ವಿದ್ಯಾರ್ಥಿಗಳಿಗೆ
ಕಿರುಕುಳ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಕಾಲೇಜಿನಲ್ಲಿ ಓದುವ ಮಕ್ಕಳಿಗೆ ರಕ್ಷಣೆ ಇಲ್ಲ. ಮಹಿಳಾ
ಉಪನ್ಯಾಸಕರಿಗೆ ಈ ಬಗ್ಗೆ ಆಕ್ರೋಶ ಹೊಂದಿದ್ದರೂ
ಮಾತನಾಡಲು ಧೈರ್ಯ ತೋರುತ್ತಿಲ್ಲ. ಹೀಗಾಗಿ ತಾರತಮ್ಯ
ತೋರುವ ಪ್ರಾಂಶುಪಾಲರು ನಮಗೆ ಬೇಡ, ಈ ಬಗ್ಗೆ ಶಿಕ್ಷಣ
ಇಲಾಖೆಯ ಅಧಿಕಾರಿಗಳು, ಬಂಟ್ವಾಳ ಶಾಸಕರು ಸೂಕ್ತ ಕ್ರಮ ಜರುಗಿಸಬೇಕು. ಎಫ್.ಐ.ಆರ್ ದಾಖಲಾಗಿರುವ ಕಾಲೇಜು ಸಂಚಾಲಕರ ಪ್ರಕಾಶ್ ಶೆಣೈ ತಕ್ಷಣ ರಾಜೀನಾಮೆ ನೀಡಬೇಕು ಹಾಗೂ ಎಫ್.ಐ.ಆರ್. ದಾಖಲಾಗಿರುವ ಇಬ್ಬರು ಶಿಕ್ಷಕರನ್ನು ತಕ್ಷಣ ವಜಾ ಮಾಡುವಂತೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಮಹಿಳಾ ಪ್ರಾಧ್ಯಾಪಕಿ ನಾಗವೇಣಿ ಎಂಬವರ ಬಗ್ಗೆ
ಕೆಟ್ಟದಾಗಿ ಬರೆದು ಮಾನಸಿಕ ಕಿರುಕುಳ ನೀಡಿದ್ದ ಆರೋಪದಲ್ಲಿ ಎಸ್ ವಿಎಸ್ ಕಾಲೇಜಿನ ಸಂಚಾಲಕ ಮತ್ತು
ಇಬ್ಬರು ಉಪನ್ಯಾಸಕರನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದರೂ, ಕಾಲೇಜಿನಲ್ಲಿ ಉಳಿದುಕೊಂಡು ವಿರೋಧ
ಮಾಡುವ ವಿದ್ಯಾರ್ಥಿಗಳ ಬಗ್ಗೆ ಕಿರುಕುಳ ನೀಡುತ್ತಿದ್ದಾರೆ.
ವಿರೋಧ ಮಾಡಿದರೆ ಟಿಸಿ ಕೊಟ್ಟು ಕಳಿಸ್ತೇವೆಂದು ಬೆದರಿಸುತ್ತಿದ್ದಾರೆ ಎಂದು ವಿದ್ಯಾರ್ಥಿ ಮುಖಂಡರು ತಿಳಿಸಿದ್ದಾರೆ.