ತನ್ನ ಪ್ರಾಣ ಪಣಕ್ಕಿಟ್ಟು ಯಜಮಾನನ ಜೀವಕ್ಕೆ ಕಂಟಕವಾಗಿದ್ದ ನಾಗರಹಾವನ್ನು ಕೊಂದು ಹಾಕಿದ ನಾಯಿ !!
ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ನಾಯಿ. ನಾಯಿಯ ವ್ಯಕ್ತಿನಿಷ್ಠೆಗೆ ಯಾರಾದರೂ ತಲೆಬಾಗಲೇಬೇಕು. ಅಂತೆಯೇ ಇಲ್ಲೊಂದು ನಾಯಿ ತನ್ನ ಯಜಮಾನನ ಪ್ರಾಣಕ್ಕೆ ಕಂಟಕವಾಗಿದ್ದ ನಾಗರಹಾವಿನೊಂದಿಗೆ ದಿಟ್ಟತನದಿಂದ ಹೋರಾಡಿ, ಹಾವನ್ನೂ ಕೊಂದು ಕೊನೆಗೆ ತನ್ನ ಪ್ರಾಣವನ್ನೂ ಸಮರ್ಪಿಸಿದ ಹೃದಯ ವಿದ್ರಾವಕ ಘಟನೆ ಕೋಲಾರ ನಗರದಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೀರಂಡಹಳ್ಳಿಯ ಬಿಎಂಟಿಸಿ ನೌಕರ ವೆಂಕಟೇಶ್ ಅವರ ಮನೆಯಲ್ಲಿ ಸಾಕಿದ್ದ ನಾಯಿಯೇ ನಾಗರಹಾವಿನೊಂದಿಗೆ ಹೋರಾಡಿ ಮೃತಪಟ್ಟ ಶ್ವಾನ. ಅಮೇರಿಕನ್ ಬುಲ್ ತಳಿಯ 3 ವರ್ಷದ ಹೆಣ್ಣು ಶ್ವಾನ ಇದಾಗಿದ್ದು, ಮನೆಯ ಮಂದಿಯ ಅಕ್ಕರೆಯ ಮುದ್ದಿನ ಮಗುವಿನಂತಿತ್ತು.
ತೋಟದ ಮನೆ ಬಳಿ ಮಾಲೀಕ ವಿಲಾಸ್ ಮೊಬೈಲ್‍ನಲ್ಲಿ ಮಾತನಾಡುತ್ತಾ ಹೊರಗೆ ಬಂದು ಮನೆಯಂಗಳದಲ್ಲಿ ಬೆಳೆದಿದ್ದ ಹಸಿರು ಹುಲ್ಲಿನ ನಡುವೆ ನಡೆದಾಡುತ್ತಿದ್ದರು. ಈ ವೇಳೆ ನಾಯಿಯೂ ಸಹ ತನ್ನ ಯಜಮಾನನನ್ನು ಹಿಂಬಾಲಿಸುತ್ತಿತ್ತು. ಅಷ್ಟರಲ್ಲಿ ಹುಲ್ಲಿನ ಮರೆಯಲ್ಲಿ ಮಲಗಿದ್ದ ನಾಗರ ಹಾವೊಂದು ದಿಟ್ಟನೆ ಹೆಡೆ ಎತ್ತಿ, ಬುಸುಗುಟ್ಟಿ ನಿಂತು, ಇನ್ನೇನು ಕಚ್ಚಲು ಸಜ್ಜಾಗಿತ್ತು. ಅಪಾಯದ ಸುಳಿವು ಅರಿತ ಶ್ವಾನವು ತಕ್ಷಣವೇ ಮುನ್ನುಗ್ಗಿ ಯಜಮಾನನ ಕಾಲಿಗೆ ಅಡ್ಡ ಬಂದು ಹಾವನ್ನು ಹಿಡಿದು ಎಸೆದಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ನಾಯಿ ನಾಗರಹಾವಿನ ಕುತ್ತಿಗೆಗೆ ಬಾಯಿ ಹಾಕಿ ಕಚ್ಚಿದಾಗ ನರಳಿದ ನಾಗರ, ತನ್ನ ದೇಹವನ್ನು ಶ್ವಾನದ ಕೊರಳಿಗೆ ಸುತ್ತಿ ಬಿಗಿ ಹಿಡಿದಿದೆ. ಅಲ್ಲದೆ ಹಾವು ನಾಯಿಯ ನಾಲಿಗೆ ಹಾಗೂ ಮುಖಕ್ಕೆ ಕಚ್ಚಿದೆ. ಇದರಿಂದ ಕೆರಳಿದ ಶ್ವಾನವು ನಾಗರನ ಕುತ್ತಿಗೆ ಸೀಳಿ ಕೊಂದು ಹಾಕಿದೆ. ಇದಾದ ಬಳಿಕ ಮನೆಯವರು ಕೊರಳಿಗೆ ಸುತ್ತಿಕೊಂಡಿದ್ದ ಹಾವಿನ ಮೃತದೇಹವನ್ನು ಬಿಡಿಸಿ ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಶ್ವಾನವು ಮೃತಪಟ್ಟಿದೆ.
ಇನ್ನು ಮನೆ ಮಾಲೀಕನ ಜೀವ ರಕ್ಷಣೆ ಮಾಡಿದ ಮುದ್ದಿನ ಶ್ವಾನದ ಮೃತದೇಹವನ್ನು ಮನೆಯಂಗಳದ ಬದಿಯಲ್ಲಿ ಅಂತ್ಯಕ್ರಿಯೆ ಮಾಡಿ ಪೂಜಿಸಲಾಗಿದೆ. ನಾಯಿಯ ಈ ಕಾರ್ಯಕ್ಕೆ ಯಾವ ಮಾತು ಕೂಡ ಹೊರಬರಲಾರದೆ, ಮುದ್ದಿನ ಶ್ವಾನಕ್ಕೆ ನೋವಿನ ವಿದಾಯ ಹೇಳಿದ್ದಾರೆ ಮನೆಯವರು.