ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದ ಪೊಲೀಸರು | ಚಾಲಕ ಸೇರಿದಂತೆ, 33 ಕ್ವಿಂಟಾಲ್ ಅಕ್ಕಿ ಹಾಗೂ ವಾಹನ ವಶ

ಬೆಳ್ತಂಗಡಿ: ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ತಾಲೂಕಿನಿಂದ ಮೂಡಿಗೆರೆ ಕಡೆಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು, ಚಾರ್ಮಾಡಿಯ ಚೆಕ್ ಪೋಸ್ಟಿನಲ್ಲಿ ಧರ್ಮಸ್ಥಳ ಪೋಲೀಸರು ವಶಪಡಿಸಿಕೊಂಡಿರುವ ಘಟನೆ ವರದಿಯಾಗಿದೆ.

 

ಬಂಧಿತ ಆರೋಪಿಯನ್ನು ಮೂಡಿಗೆರೆ ನಿವಾಸಿ ಧನಂಜಯ್ ಎಂದು ಗುರುತಿಸಲಾಗಿದೆ.

ಚಾರ್ಮಾಡಿ ಗೇಟಿನಲ್ಲಿ ಪೊಲೀಸರು ಪಿಕಪ್ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ, ವಾಹನದಲ್ಲಿರುವ ಅಕ್ಕಿ ಅನ್ನಭಾಗ್ಯ ಯೋಜನೆಯ ಅಕ್ಕಿಯಂತೆ ಕಂಡು ಬಂದಿದ್ದು, ಅನುಮಾನಗೊಂಡು ಚಾಲಕನನ್ನು ವಿಚಾರಣೆ
ನಡೆಸಿದಾಗ ಚಾಲಕ ಇದನ್ನು ಒಪ್ಪಿಕೊಂಡಿದ್ದಾನೆ.

ಬಳಿಕ ಸ್ಥಳಕ್ಕೆ ಆಹಾರ ಇಲಾಖೆಯ ಅಧಿಕಾರಿಗಳನ್ನು ಕರೆಸಲಾಗಿದ್ದು, ಅವರು ಪರಿಶೀಲನೆ ನಡೆಸಿದಾಗ ಇದು ಮೇ ತಿಂಗಳ ಅನ್ನಭಾಗ್ಯದ ಅಕ್ಕಿಯಂತೆ ಹೋಲುತ್ತಿದೆ ಎಂದು
ಖಚಿತಪಡಿಸಿದ್ದಾರೆ. ಬಳಿಕ ಚಾಲಕ ಹಾಗೂ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರು ಪಿಕಪ್ ನಲ್ಲಿದ್ದ 50 ಕೆಜಿ ತೂಕದ 59 ಪ್ಲಾಸ್ಟಿಕ್ ಚೀಲ ಅಕ್ಕಿ ಹಾಗೂ 25 ಕೆ.ಜಿ ತೂಕದ 14 ಚೀಲ ಅಕ್ಕಿ ಹೀಗೆ ಒಟ್ಟು 33 ಕ್ವಿಂಟಾಲ್ ಅಕ್ಕಿಯನ್ನು ಹಾಗೂ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದಿರುವ ಅಕ್ಕಿಯ ಮೌಲ್ಯ
49,500 ರೂ. ಎಂದು ಅಂದಾಜಿಸಲಾಗಿದೆ.

ಆದರೆ ಈ ಅಕ್ಕಿಯನ್ನು ಎಲ್ಲಿಂದ ಸಾಗಿಸಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿದು ಬರಬೇಕಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.