ಉತ್ಸಾಹದಿಂದ ಮದುವೆಗೆ ಬಂದ ಗಿಫ್ಟ್ ತೆರೆದ ವಧು- ವರ, ಆಸ್ಪತ್ರೆಗೆ ದಾಖಲು| ದ್ವೇಷ ಸಾಧನೆಗೆ ಅಕ್ಕನ ಮಾಜಿ ಬಾಯ್ ಫ್ರೆಂಡ್ ಮಾಡಿದ ಖತರ್ನಾಕ್ ಪ್ಲ್ಯಾನ್!!!

ಪ್ರೀತಿಸಿದ ಹುಡುಗಿ ಕೈಕೊಟ್ಟಳು ಎಂಬ ಒಂದೇ ಒಂದು ಕಾರಣಕ್ಕೆ ಪ್ರೇಮಿಯೋರ್ವ, ಆಕೆಯ ತಂಗಿಯ ಮದುವೆಯ ಸಮಯದಲ್ಲಿ ಭಯಾನಕ ಗಿಫ್ಟ್ ನೀಡಿ, ಸೇಡು ತೀರಿಸಿಕೊಂಡಿದ್ದಾನೆ. ಹೌದು. ಅಕ್ಕನ ಕೋಪ ತಂಗಿಯ ಮೇಲೆ ತೀರಿಸಿಕೊಂಡಿದ್ದಾನೆ.

ಪ್ರೇಯಸಿಯ ತಂಗಿಯ ಮದುವೆಗೆ ಸ್ಫೋಟಕ ಉಡುಗೊರೆ ನೀಡುವ ಮೂಲಕ ನೂತನ ವಧು-ವರರು ಆಸ್ಪತ್ರೆ ಸೇರುವಂತೆ ಮಾಡಿದ್ದಾನೆ.

ದಕ್ಷಿಣ ಗುಜರಾತ್‌ನ ನವಸಾರಿ ಜಿಲ್ಲೆಯ ಮಿಂಧಬರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲತೀಶ್ ಗವೀತ್ ಹಾಗೂ ಸಲ್ಮಾ ಎನ್ನುವವರ ಮದುವೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಸಲ್ಮಾಳ ಅಕ್ಕನ ಮಾಜಿ ಪ್ರೇಮಿ ರಾಜು ಪಟೇಲ್ ಎಂಬಾತ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಮದುವೆಗೆ ಬಂದಿದ್ದ ಈತ ಒಂದು ಗಿಫ್ಟ್ ಕೊಟ್ಟು ಹೋಗಿದ್ದ. ಮದುವೆಯ ನಂತರ ಎಲ್ಲಾ ಗಿಫ್ಟ್‌ಗಳನ್ನು ವಧು-ವರರು ಮತ್ತು ಕುಟುಂಬಸ್ಥರು ತೆರೆಯುತ್ತಿದ್ದರು. ರಾಜು ಕೊಟ್ಟ ಗಿಫ್ಟ್ ಅನ್ನು ಮದುಮಗ ತೆರೆಯುತ್ತಿದ್ದ. ಅದರಲ್ಲಿ ರೀಚಾರ್ಜ್ ರೀತಿಯ ಒಂದು ವಸ್ತು ಕಾಣಿಸಿತು. ಅದನ್ನು ಪರಿಶೀಲನೆ ಮಾಡುತ್ತಿದ್ದಾಗಲೇ ಅದು ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ವರನ ಕಣ್ಣಿಗೆ ಭಾರಿ ಹಾನಿಯಾಗಿದೆ, ಮಾತ್ರವಲ್ಲದೇ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಮದುಮಗಳು ಸಲ್ಮಾ ಕೂಡ ಆತನ ಪಕ್ಕದಲ್ಲಿಯೇ ಇದ್ದಳು. ಆಕೆ ಸೇರಿದಂತೆ ಅಲ್ಲಿದ್ದ ಸಂಬಂಧಿಕರಿಗೂ ಗಾಯಗಳಾಗಿವೆ. ಎಲ್ಲರನ್ನೂ ಈಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪೈಕಿ ವರ ಲತೀಶ್ ಗವೀತ್ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ಪೊಲೀಸರು ತನಿಖೆ ಕೈಗೊಂಡಾಗ ಈ ಉಡುಗೊರೆ ರಾಜು ನೀಡಿರುವುದು ಬೆಳಕಿಗೆ ಬಂದಿದೆ. ತನಿಖೆ ನಡೆಸಿದಾಗ ಆತ ವಧುವಿನ ಅಕ್ಕನ ಮಾಜಿ ಬಾಯ್ ಫ್ರೆಂಡ್ ಎನ್ನುವುದು ತಿಳಿದುಬಂದಿದೆ. ಯಾರದ್ದೋ ಸಂಬಂಧಕ್ಕೆ ಇನ್ನಾರೋ ಆಸ್ಪತ್ರೆ ಸೇರುವಂತಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave A Reply

Your email address will not be published.