ನೀರು ತುಂಬುವ ಡ್ರಮ್​​​​ನಲ್ಲಿ ತಾಯಿಯ ಶವವನ್ನು ಹೂತಿಟ್ಟು ಸಿಮೆಂಟ್ ತುಂಬಿದ ಮಗ

ವಯಸ್ಸಾದ ತಂದೆ-ತಾಯಿಯನ್ನು ಅದೆಷ್ಟೋ ಮಂದಿ ಕಡೆಗಣಿಸುತ್ತಾರೆ. ಒಂದು ತುತ್ತು ಅನ್ನವನ್ನು ನೀಡದೆ ಕತ್ತಲೆ ಕೋಣೆಯಲ್ಲಿ ಕೂಡಿಹಾಕಿರುವಂತಹ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದೆ. ಇದೀಗ ಅದೇ ಸಾಲಿಗೆ ಇನ್ನೊಂದು ಪ್ರಕರಣ ಸೇರಿದ್ದು, ಮಗನೊಬ್ಬ ತನ್ನ ತಾಯಿಯ ಶವವನ್ನು ನೀರು ತುಂಬುವ ಡ್ರಮ್​​​​ನಲ್ಲಿ ಹೂತಿಟ್ಟ ಆಘಾತಕಾರಿ ಘಟನೆ ನಡೆದಿದೆ.

ಈ ಘಟನೆ ಚೆನ್ನೈನಲ್ಲಿ ನಡೆದಿದ್ದು, ಮಗ ತಾಯಿಯ ಶವವನ್ನು ಡ್ರಮ್​ನಲ್ಲಿ ಸಿಮೆಂಟ್ ತುಂಬಿ ಹೂತಿಟ್ಟಿದ್ದಾನೆ. ಹಾಗಾಗಿ ಹೊರ ತೆಗೆಯಲು ಸಾಧ್ಯವಾಗದೇ ಶವದೊಂದಿಗೆ ಡ್ರಮ್​​ ಅನ್ನೇ ಶವಪರೀಕ್ಷೆಗಾಗಿ ರಾಯಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ನೀಲಂಗರೈ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮಗ ಸುರೇಶನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಘಟನೆಯ ವಿವರ:
86 ವರ್ಷದ ಶೇನ್​ಬೇಗಂ ಅವರು ಚೆನ್ನೈನ ನೀಲಂಗರೈ ಪ್ರದೇಶದವರು. ಅವರಿಗೆ ಸುರೇಶ್ ಮತ್ತು ಬಾಬು ಎಂಬ ಇಬ್ಬರು ಗಂಡು ಮಕ್ಕಳಿದ್ದು, ಸುರೇಶ ಎಂಬುವವನೊಂದಿಗೆ ಶೇನ್​​ಬೇಗಂ ಮನೆಯಲ್ಲಿ ವಾಸವಾಗಿದ್ದರು. ಸುರೇಶ್ ಸ್ವಲ್ಪ ಮಾನಸಿಕ ಅಸ್ವಸ್ಥ ಎನ್ನಲಾಗಿದೆ. ಇದರಿಂದ ಸುರೇಶನ ಪತ್ನಿ ಮತ್ತು ಮಕ್ಕಳು ಪ್ರತ್ಯೇಕವಾಗಿ ವಾಸವಾಗಿದ್ದರು. ಈ ಮಧ್ಯೆ ಕಳೆದ ಕೆಲ ದಿನಗಳಿಂದ ತಾಯಿ ಕಾಣುತ್ತಿಲ್ಲ ಎಂದು ಗೊತ್ತಾಗಿ, ಅಕ್ಕಪಕ್ಕದ ಮನೆಯವರು ಹಾಗೂ ಸಹೋದರ ಬಾಬು, ಸುರೇಶನನ್ನು ತಾಯಿ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಆದರೆ, ಈ ಬಗ್ಗೆ ಸುರೇಶ ಯಾವುದೇ ಉತ್ತರ ನೀಡಿರಲಿಲ್ಲ.

ಹೀಗಾಗಿ ಶೇನ್​​ಬೇಗಂ ಇನ್ನೊಬ್ಬ ಮಗ ಬಾಬು ಮನೆಗೆ ಬಂದಾಗ, ಇವರಿಬ್ಬರ ನಡುವೆ ವಾಗ್ವಾದ ನಡೆದಿದ್ದು, ಈ ಘಟೆನೆಯಿಂದ ಅನುಮಾನ ಬಂದು, ಬಾಬು ಪೊಲೀಸರಿಗೆ ತಾಯಿ ಕಾಣುತ್ತಿಲ್ಲ ಎಂದು ದೂರು ನೀಡಿದ್ದಾರೆ. ಬಾಬು ಮಾಹಿತಿ ಖಚಿತ ಪಡಿಸಿಕೊಂಡ ಪೊಲೀಸರು ಸ್ಥಳಕ್ಕೆ ಧಾವಿಸಿ ಸುರೇಶ್​​ನನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರ ಬಂದಿದೆ.

Leave A Reply

Your email address will not be published.