ನೀರು ತುಂಬುವ ಡ್ರಮ್ನಲ್ಲಿ ತಾಯಿಯ ಶವವನ್ನು ಹೂತಿಟ್ಟು ಸಿಮೆಂಟ್ ತುಂಬಿದ ಮಗ
ವಯಸ್ಸಾದ ತಂದೆ-ತಾಯಿಯನ್ನು ಅದೆಷ್ಟೋ ಮಂದಿ ಕಡೆಗಣಿಸುತ್ತಾರೆ. ಒಂದು ತುತ್ತು ಅನ್ನವನ್ನು ನೀಡದೆ ಕತ್ತಲೆ ಕೋಣೆಯಲ್ಲಿ ಕೂಡಿಹಾಕಿರುವಂತಹ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದೆ. ಇದೀಗ ಅದೇ ಸಾಲಿಗೆ ಇನ್ನೊಂದು ಪ್ರಕರಣ ಸೇರಿದ್ದು, ಮಗನೊಬ್ಬ ತನ್ನ ತಾಯಿಯ ಶವವನ್ನು ನೀರು ತುಂಬುವ ಡ್ರಮ್ನಲ್ಲಿ ಹೂತಿಟ್ಟ ಆಘಾತಕಾರಿ ಘಟನೆ ನಡೆದಿದೆ.
ಈ ಘಟನೆ ಚೆನ್ನೈನಲ್ಲಿ ನಡೆದಿದ್ದು, ಮಗ ತಾಯಿಯ ಶವವನ್ನು ಡ್ರಮ್ನಲ್ಲಿ ಸಿಮೆಂಟ್ ತುಂಬಿ ಹೂತಿಟ್ಟಿದ್ದಾನೆ. ಹಾಗಾಗಿ ಹೊರ ತೆಗೆಯಲು ಸಾಧ್ಯವಾಗದೇ ಶವದೊಂದಿಗೆ ಡ್ರಮ್ ಅನ್ನೇ ಶವಪರೀಕ್ಷೆಗಾಗಿ ರಾಯಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ನೀಲಂಗರೈ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮಗ ಸುರೇಶನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಘಟನೆಯ ವಿವರ:
86 ವರ್ಷದ ಶೇನ್ಬೇಗಂ ಅವರು ಚೆನ್ನೈನ ನೀಲಂಗರೈ ಪ್ರದೇಶದವರು. ಅವರಿಗೆ ಸುರೇಶ್ ಮತ್ತು ಬಾಬು ಎಂಬ ಇಬ್ಬರು ಗಂಡು ಮಕ್ಕಳಿದ್ದು, ಸುರೇಶ ಎಂಬುವವನೊಂದಿಗೆ ಶೇನ್ಬೇಗಂ ಮನೆಯಲ್ಲಿ ವಾಸವಾಗಿದ್ದರು. ಸುರೇಶ್ ಸ್ವಲ್ಪ ಮಾನಸಿಕ ಅಸ್ವಸ್ಥ ಎನ್ನಲಾಗಿದೆ. ಇದರಿಂದ ಸುರೇಶನ ಪತ್ನಿ ಮತ್ತು ಮಕ್ಕಳು ಪ್ರತ್ಯೇಕವಾಗಿ ವಾಸವಾಗಿದ್ದರು. ಈ ಮಧ್ಯೆ ಕಳೆದ ಕೆಲ ದಿನಗಳಿಂದ ತಾಯಿ ಕಾಣುತ್ತಿಲ್ಲ ಎಂದು ಗೊತ್ತಾಗಿ, ಅಕ್ಕಪಕ್ಕದ ಮನೆಯವರು ಹಾಗೂ ಸಹೋದರ ಬಾಬು, ಸುರೇಶನನ್ನು ತಾಯಿ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಆದರೆ, ಈ ಬಗ್ಗೆ ಸುರೇಶ ಯಾವುದೇ ಉತ್ತರ ನೀಡಿರಲಿಲ್ಲ.
ಹೀಗಾಗಿ ಶೇನ್ಬೇಗಂ ಇನ್ನೊಬ್ಬ ಮಗ ಬಾಬು ಮನೆಗೆ ಬಂದಾಗ, ಇವರಿಬ್ಬರ ನಡುವೆ ವಾಗ್ವಾದ ನಡೆದಿದ್ದು, ಈ ಘಟೆನೆಯಿಂದ ಅನುಮಾನ ಬಂದು, ಬಾಬು ಪೊಲೀಸರಿಗೆ ತಾಯಿ ಕಾಣುತ್ತಿಲ್ಲ ಎಂದು ದೂರು ನೀಡಿದ್ದಾರೆ. ಬಾಬು ಮಾಹಿತಿ ಖಚಿತ ಪಡಿಸಿಕೊಂಡ ಪೊಲೀಸರು ಸ್ಥಳಕ್ಕೆ ಧಾವಿಸಿ ಸುರೇಶ್ನನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರ ಬಂದಿದೆ.