ಅಯೋಧ್ಯೆ ನಮ್ದಾಯ್ತು; ಇನ್ನೂ ಕಾಶಿ, ಮಥುರಾ ಮತ್ತು ಈಗ ಜ್ಞಾನವಾಪಿ ಕೂಡಾ ನಮ್ಮದಾಗುತ್ತೆ – ಕೆ.ಎಸ್ ಈಶ್ವರಪ್ಪ ಹೇಳಿಕೆ
ನಮ್ಮ ಹಿಂದೂ ಶ್ರದ್ಧಾ ಕೇಂದ್ರಗಳ ಅತಿಕ್ರಮಣ ಇನ್ನು ಅಸಾಧ್ಯ. ಈಗಾಗಲೇ ಅಯೋಧ್ಯೆ ನಮ್ಮದಾಗಿದೆ. ಕಾಶಿಯಲ್ಲೂ ಪುರಾತನ ದೇವಾಲಯದ ಕುರುಹು ಪತ್ತೆಯಾಗಿದೆ. ಮುಂದಿನ ದಿನಗಳಲ್ಲಿ ಮಥುರಾ ಕೂಡ ನಮ್ಮದಾಗಲಿದೆ ಎಂದು ಬಿಜೆಪಿಯ ಹಿರಿಯ ನಾಯಕ, ಮಾಜಿ ಮಂತ್ರಿ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ಸುದೀರ್ಘ ಹೋರಾಟದ ಬಳಿಕ ಅಯೋಧ್ಯೆ ಮರಳಿ ಕೈ ಸೇರಿತು. ಕಾಶಿಯಲ್ಲಿ ಈಗ ಕಾನೂನು ಹೋರಾಟ ಬಿರುಸಾಗಿ ಆರಂಭವಾಗಿದೆ. ಇನ್ನು ಹಿಂದೂ ಧಮೀರ್ಯರ ಶ್ರದ್ಧಾ ಕೇಂದ್ರಗಳನ್ನು ಅತಿಕ್ರಮಣ ಮಾಡಲು ಸಾಧ್ಯವಿಲ್ಲ. ಈಗ ಜ್ಞಾನವ್ಯಾಪಿ ಮಸೀದಿಯ ವಿಡಿಯೋ ಚಿತ್ರೀಕರಣ ಮಾಡಲು ಕೋರ್ಟ್ ಅನುಮತಿ ನೀಡಿದ್ದು ಅತ್ಯಂತ ಸ್ವಾಗತಾರ್ಹ. ಈಗಾಗಲೇ ಅಲ್ಲಿ ಸ್ವರ್ಣಗೌರಿ, ಹನುಮಾನ್ ವಿಗ್ರಹಗಳು ಪತ್ತೆಯಾದ ಬೆನ್ನಲ್ಲೇ ದೊಡ್ಡ ಶಿವಲಿಂಗವೂ ಸಿಕ್ಕಿರುವುದು ಹಿಂದುಗಳ ನಂಬಿಕೆಗೆ ಮತ್ತಷ್ಟು ಪುಷ್ಠಿ ಸಿಕ್ಕಿದೆ ಎಂದರು.
ಅಲ್ಲಿ ಜ್ಞಾನವ್ಯಾಪಿ ಮಸೀದಿ ಕೆಡವಿ ವಿಶ್ವನಾಥ ದೇವಾಲಯ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಲೋಕಸಭಾ ಸದಸ್ಯ ಅಸಾದುದ್ದೀನ್ ಓವೈಸಿ ಹೇಳಿರುವುದು ಹಾಸ್ಯಾಸ್ಪದ. ಜ್ಞಾನವ್ಯಾಪಿ ಜಾಗ ಓವೈಸಿಯ ಖಾಸಗಿ ಆಸ್ತಿಯಲ್ಲ. ಅಲ್ಲದೆ ಆತ ಔರಂಗಜೇಬನ ಸಮಾಧಿಗೆ ತೆರಳಿ ಗೌರವ ಸಲ್ಲಿಸಿರುವುದು ದೇಶದ್ರೋಹದ ಚಟುವಟಿಕೆಯಾಗಿದೆ. ಈ ಘಟನೆಯನ್ನು ಕಾಂಗ್ರೆಸ್ ವಿರೋಧಿಸಬೇಕೆಂದು ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ.