ಚಿತ್ರದುರ್ಗ: ಮಳೆಯ ಆರ್ಭಟಕ್ಕೆ 114 ಕುರಿಗಳು, 39 ಮೇಕೆಗಳು,1 ಹಸು ಬಲಿ
ಚಿತ್ರದುರ್ಗ ಜಿಲ್ಲೆಯ ಮೊಳಕಾಲೂರು ತಾಲೂಕಿನಲ್ಲಿ ಸೋಮವಾರ ಮಳೆಯ ಆರ್ಭಟಕ್ಕೆ ಅಡವಿಮಲ್ಲಾಪುರ, ಚಿಕ್ಕೇರಹಳ್ಳಿ ಮತ್ತು ತುಮಕೂರ್ಲಹಳ್ಳಿ ವಿವಿದೆಡೆ ಸಿಡಿಲಿಗೆ 114 ಕುರಿಗಳು, 39 ಮೇಕೆಗಳು,1 ಹಸು ಬಲಿಯಾದ ಘಟನೆ ನಡೆದಿದೆ.
ಮೊಳಕಾಲೂರಿನ ವಿವಿದೆಡೆ ಸೋಮವಾರ ಸಂಜೆ ಗಾಳಿ, ಗುಡುಗು, ಸಿಡಿಲಿನ ಆರ್ಭಟ ಹೆಚ್ಚಾಗಿತ್ತು. ಅಡವಿಮಲ್ಲಾಪುರ ಗ್ರಾಮದ ಬಳಿಯ ಬಯಣ್ಣ, ಪಾಪಯ್ಯ ಸಹೋದರರಿಗೆ ಸೇರಿದ ಜಾನುವಾರುಗಳು ಕುರಿರೊಪ್ಪ ಮತ್ತು ಜಮೀನಿನಲ್ಲಿ ಕಟ್ಟಿಹಾಕಿದ್ದ ಸಂದರ್ಭದಲ್ಲಿ ಸಿಡಿಲಿಗೆ ಬಲಿಯಾಗಿವೆ. ಚಿಕ್ಕೇರಹಳ್ಳಿ ಬಳಿ ರೈತ ಓಬಣ್ಣಗೆ ಸೇರಿದ ಎತ್ತು ಸಿಡಿಲಿಗೆ ಬಲಿ. ಗಾಳಿಗೆ ಓಬಣ್ಣ ಜಮೀನಿನಲ್ಲಿದ್ದ ಕುರಿ ಶೆಡ್ ಮೇಲ್ಬಾವಣಿ ಹಾರಿಹೋಗಿದೆ. ತಾಲೂಕಿನ ಅಡವಿ ಮಲ್ಲಾಪುರ ಗ್ರಾಮದ ರೀ ಸರ್ವೇ ನಂಬರ್ 11/7ರಲ್ಲಿ ಓಬಣ್ಣ ಜಮೀನಿನಲ್ಲಿ ಶೆಡ್ ನಿರ್ಮಿಸಿದ್ದರು.
ತುಮಕೂರ್ಲಹಳ್ಳಿ ಗ್ರಾಮದ ಬೈಯ್ಯಣ್ಣ, ಬೋರಯ್ಯ, ಸುರೇಶ, ಶರಣಪ್ಪ, ಅಶೋಕ ಇವರುಗಳು ತಮ್ಮ ಕುರಿಗಳನ್ನು ಮೇಯಿಸುತ್ತಿರುವಾಗ ಮಳೆ ಪ್ರಾರಂಭವಾಗಿದ್ದು, ಮಳೆಹನಿಗಳಿಂದ ತಪ್ಪಿಸಿಕೊಳ್ಳಲು ತಮ್ಮ ಕುರಿ-ಮೇಕೆ ದನಗಳನ್ನ ಮೇಯಿಸುತ್ತಿದ್ದ ಜಮೀನಿನಲ್ಲಿನ ಬೇವಿನ ಮರದ ಕೆಳಗೆ ಹೋಗಿದ್ದಾಗ ಸಿಡಿಲು ಬಡಿದು ಸಿಡಿಲು ಬಡಿದು 39 ಮೇಕೆ, 1 ಓತ, 114 ಕುರಿ ಮತ್ತು ಒಂದು ಹಸು ಸಾವನಪ್ಪಿದೆ ಎನ್ನಲಾಗಿದೆ. ಸ್ಥಳಕ್ಕೆ ತಹಶೀಲ್ದಾರ್, ಕಂದಾಯಾಧಿಕಾರಿಗಳು, ಪಶು ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.