54 ದಿನಗಳ ಕಾಲ ಹೆದ್ದಾರಿ ಕಾಮಗಾರಿ ಸ್ಥಗಿತ | ಕಾರಣ ಹಾವು ಮೊಟ್ಟೆಗೆ ಕಾವು ಕೊಡುತ್ತಿತ್ತು!!
ರಸ್ತೆ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಅಣತಿ ದೂರದಲ್ಲಿ ಅಂದರೆ ರಸ್ತೆ ಬದಿಯಲ್ಲಿ ಹಾವೊಂದು ಮೊಟ್ಟೆಗಳಿಗೆ ಕಾವು ನೀಡುತ್ತಿದ್ದು ಕಂಡು ಬಂದು ರಸ್ತೆ ಕಾಮಗಾರಿಯನ್ನು 54 ದಿನ ನಿಲ್ಲಿಸಲಾಯಿತು ಎಂದರೆ ನಂಬುತ್ತೀರಾ? ಹೌದು. ಇದು ನಿಜ.
ಈ ಘಟನೆ ನಡೆದಿರುವುದು ಕಾಸರಗೋಡಿನಲ್ಲಿ. ರಸ್ತೆ ಕಾಮಗಾರಿ ಹೊಣೆ ಹೊತ್ತಿರುವ ಉರಾಳುಂಗಲ್ ಸೊಸೈಟಿಯು ಈ ನಿರ್ಧಾರ ತೆಗೆದುಕೊಂಡಿದೆ.
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಸುವ ವೇಳೆ ಹಾವೊಂದು ಕಂಡು ಬಂದಿದ್ದರಿಂದ, ಆ ಹಾವನ್ನು ಸ್ಥಳಾಂತರಿಸಲು ಯತ್ನಿಸುತ್ತಿರುವಾಗ ಅದು ಮೊಟ್ಟೆಗೆ ಕಾವು ನೀಡುತ್ತಿರುವ ಅಂಶ ಗಮನಕ್ಕೆ ಬಂದಿತ್ತು. ಕೂಡಲೇ ವನ್ಯಜಿವಿ ಇಲಾಖೆ ಸಂಶೋಧನಾ ಮುಖ್ಯಸ್ಥ ಮವೀಶ ಕುಮಾರ್, ಈ ಸಂದರ್ಭ ಹಾವಿನ ಸ್ಥಳಾಂತರ ಸರಿಯಲ್ಲ ಎಂದು ಸಲಹೆ ನೀಡಿದರು. ಮೊಟ್ಟೆ ಒಡೆಯಲು 27 ಸೆಂ.ನಿಂದ 31 ಸೆಂ.ತಾಪಮಾನ ಬೇಕು. ತಾಯಿ ಹಾವಿನ ಕಾವು ಮೊಟ್ಟೆಗಳಿಗೆ ಸಿಗಬೇಕು. ಮೊಟ್ಟೆ ಒಡೆದು ಮರಿಗಳು ಹೊರಬರಲು 54 ದಿನ ಬೇಕು, ಬಳಿಕ ಹಾವನ್ನು ಸ್ಥಳಾಂತರಿಸಬಹುದು ಎಂದು ತಿಳಿಸಿದ್ದರು. ಅದರಂತೆ 54 ದಿನಗಳ ಕಾಲ ಕಾಮಗಾರಿ ಸ್ಥಗಿತಗೊಳಿಸಲಾಯಿತು. ಹಾವಿನ ಮರಿಗಳು ಮೊಟ್ಟೆಯಿಂದ ಹೊರ ಬಂದಿವೆ. ಸೋಮವಾರ ಹೆದ್ದಾರಿ ಕಾಮಗಾರಿ ಪುನರಾರಂಭಗೊಂಡಿದೆ.
ಮಾನವೀಯತೆ ಮಾಯವಾಗುತ್ತಿರುವ ಈ ಕಾಲದಲ್ಲಿ ಪ್ರಾಣಿಗೋಸ್ಕರ ಬರೋಬ್ಬರಿ ಎರಡು ತಿಂಗಳ ಕಾಲ ರಸ್ತೆ ಕಾಮಗಾರಿ ನಿಲ್ಲಿಸಿದ್ದು, ನೋಡಿದರೆ ಮೆಚ್ಚಲೇಬೇಕು.