ಇಂದಿನಿಂದ ಹೊಸ ಶೈಕ್ಷಣಿಕ ವರ್ಷದ ತರಗತಿಗಳು ಆರಂಭ | ಈ ಬಾರಿ ಶಾಲಾ ಮಕ್ಕಳಿಗಿಲ್ಲ ಸೈಕಲ್ ಭಾಗ್ಯ !!

ಇಂದಿನಿಂದ 2022-23ನೇ ಸಾಲಿನ ಹೊಸ ಶೈಕ್ಷಣಿಕ ವರ್ಷದ ಶಾಲೆಗಳು ಪ್ರಾರಂಭವಾಗಿದೆ. ಇಷ್ಟು ದಿನ ಬೇಸಿಗೆ ರಜೆಯ ಮಜಾ ಅನುಭವಿಸಿದ ಮಕ್ಕಳು ಬ್ಯಾಗ್ ಹೊತ್ತುಕೊಂಡು ಶಾಲೆಗೆ ಹೋಗಿದ್ದಾರೆ. ಹೀಗಿರುವಾಗ ಶಾಲಾ ಮಕ್ಕಳಿಗೆ ಈ ಬಾರಿ ಸರ್ಕಾರ ಸೈಕಲ್ ಭಾಗ್ಯ ಯೋಜನೆಯನ್ನು ನಿಲ್ಲಿಸಿದೆ ಎಂಬ ಮಾತು ಕೇಳಿ ಬರುತ್ತಿದೆ.

ಶಾಲೆ ಪ್ರಾರಂಭಕ್ಕೆ ಶಿಕ್ಷಣ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದ್ದು, ಮೊದಲ 15 ದಿನ ಮಕ್ಕಳಿಗೆ ಆಟದ ಜೊತೆ ಪಾಠವೂ ಇರಲಿದೆ. ಎರಡು ವರ್ಷ ಕೊರೋನಾದಿಂದಾದ ಕಲಿಕಾ ನಷ್ಟವನ್ನು ತುಂಬಲು ಈ ಬಾರಿ 15 ದಿನ ಮುಂಚಿತವಾಗಿ ತರಗತಿಗಳನ್ನು ಪ್ರಾರಂಭ ಮಾಡಲಾಗಿದೆ. ಈಗಾಗಲೇ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಾಲೆಗಳನ್ನು ತಳಿರು-ತೋರಣಗಳಿಂದ ಅಲಂಕರಿಸಲಾಗಿದೆ.

ಈ ಎಲ್ಲದರ ಮಧ್ಯೆ ಶಾಲೆಗಳ ಆರಂಭವಾಗುತ್ತಿರುವ ಸಂದರ್ಭದಲ್ಲಿಯೇ ವಿದ್ಯಾರ್ಥಿಗಳಿಗೆ ಸರ್ಕಾರ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಈ ಬಾರಿಯೂ ರಾಜ್ಯದ ಮಕ್ಕಳಿಗೆ ಸೈಕಲ್ ಭಾಗ್ಯ ಇಲ್ಲ. ಸಿಎಂ, ಸಚಿವರ, ಶಾಸಕರ ಸಂಬಳ, ಚರ್ಚೆ ಆಗದ ಅಧಿವೇಶನಕ್ಕೆ ಕೋಟಿ, ಕೋಟಿ ಖರ್ಚು ಮಾಡಿರುವ ಸರ್ಕಾರ, ಬಡ ವಿದ್ಯಾರ್ಥಿಗಳಿಗೆ ಸೈಕಲ್ ನೀಡಲು ಹಿಂದೇಟು ಹಾಕುತ್ತಿರುವುದು ಅಂತೂ ಸತ್ಯ.

ಬಜೆಟ್‍ನಲ್ಲಿ ಅನುದಾನ ಮೀಸಲಿಡದ ಕಾರಣ 2022-23ನೇ ಸಾಲಿನ ಮಕ್ಕಳಿಗೆ ಸೈಕಲ್ ವಿತರಿಸುತ್ತಿಲ್ಲ. ಆರ್ಥಿಕ ಕೊರತೆಯ ನೆಪವೊಡ್ಡಿ ಸೈಕಲ್ ಯೋಜನೆಗೆ ಸರ್ಕಾರ ಬ್ರೇಕ್ ಹಾಕಿದೆ. ಸೈಕಲ್ ವಿತರಿಸಲು ಸರ್ಕಾರ ಕುಂಟು ನೆಪ ಹೇಳುತ್ತಿರುವುದು ಇದೀಗ ಜನರ ಆಕ್ರೋಶಕ್ಕೆ ಕಾರಣವಾಗಿದೆ.

Leave A Reply

Your email address will not be published.