ಗಂಡನೊಂದಿಗೆ ಜಗಳವಾಡಿ, ಕೋಪದಿಂದಲೇ 65 ಕಿ.ಮೀ. ನಡೆದ ತುಂಬು ಗರ್ಭಿಣಿ | ನಂತರ ಹೆಣ್ಣು ಮಗುವಿಗೆ ಜನ್ಮವಿತ್ತಳು ಈ ಮಹಾತಾಯಿ!!!
ಗಂಡ- ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋ ಮಾತಿದೆ. ಈ ಮಾತಿನಂತೆ ಇವರಿಬ್ಬರ ನಡುವೆ ಸಣ್ಣ-ಪುಟ್ಟ ಜಗಳ ನಡೆದ್ರೇನೆ ಅದೊಂದು ಕುಟುಂಬ ಎಂದು ಕೊಳ್ಳಲು ಸಾಧ್ಯ. ಆದ್ರೆ, ಕೆಲವೊಂದು ಗಂಡ ಹೆಂಡಿರ ಜಗಳ ಅತಿರೇಕಕ್ಕೆ ಹೋಗೋದನ್ನು ನೋಡಿದ್ದೇವೆ. ಇನ್ನೂ ಕೆಲವು ಜಗಳ ಉಂಡು ಮಲಗೋವರೆಗೆ ಮಾತ್ರ ಸೀಮಿತವಾಗಿರುತ್ತೆ.
ಆದ್ರೆ, ಇಲ್ಲೊಂದು ಕಡೆ ಒಂಬತ್ತು ತಿಂಗಳ ಗರ್ಭಿಣಿ ಮಹಿಳೆಯೊಬ್ಬರು ಪತಿಯೊಂದಿಗೆ ಜಗಳವಾಡಿ ಬೇಸತ್ತು, ಎರಡು ದಿನಗಳ ಕಾಲ ನಿರಂತರವಾಗಿ 65 ಕಿಲೋಮೀಟರ್ ನಡೆದುಕೊಂಡು ಬಂದು ಕೊನೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.
ಜನ್ಮ ನೀಡಿದ ಮಹಿಳೆಯನ್ನು ವರ್ಷಿಣಿ ಎಂದು ಗುರುತಿಸಲಾಗಿದೆ.
ಈ ದಂಪತಿ ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿಯ ವೈಎಸ್ಆರ್ ನಗರದವರಾಗಿದ್ದು, ಉದ್ಯೋಗಕ್ಕಾಗಿ ತಿರುಪತಿಗೆ ಬಂದಿದ್ದರು. ಇಬ್ಬರೂ ಕೂಲಿ ಕೆಲಸ ಮಾಡಿ ಕುಟುಂಬವನ್ನು ಸಾಗಿಸುತ್ತಿದ್ದರು. ಇವರಿಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇದರಿಂದ ಬೇಸತ್ತು ಗರ್ಭಿಣಿಯಾಗಿದ್ದ ವರ್ಷಿಣಿ 65 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ತವರು ಮನೆಗೆ ತೆರಳಿದ್ದರು.
ಆದರೆ, ನಾಯ್ಡುಪೇಟೆ ಸಮೀಪಿಸುತ್ತಿದ್ದಂತೆ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮುಂದೆ ಸಾಗಲು ಸಾಧ್ಯವಾಗಲಿಲ್ಲ. ಬಳಿಕ ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಆಕೆಯ ಅವಸ್ಥೆ ನೋಡಿ 108ಗೆ ಕರೆ ಮಾಡಿದ್ದಾರೆ. ಆಂಬುಲೆನ್ಸ್ ಸಿಬ್ಬಂದಿ ಬಂದು ನೋಡಿದಾಗ ವರ್ಷಿಣಿ ಅವರ ಸ್ಥಿತಿ ಗಂಭೀರವಾಗಿತ್ತು. ನಂತರ ಆಂಬ್ಯುಲೆನ್ಸ್ನಲ್ಲಿಯೇ ವರ್ಷಿಣಿ ಮಗುವಿಗೆ ಜನ್ಮ ನೀಡಿದ್ದಾಳೆ.
ವರ್ಷಿಣಿ 2 ದಿನಗಳಿಂದ ಊಟ ಮಾಡದೇ ಇದ್ದ ಕಾರಣ ಸುಸ್ತಾಗಿದ್ದು, ಕೂಡಲೇ ಆಕೆಯನ್ನು ನೆಲ್ಲೂರು ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ತಾಯಿ-ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.