ನೌಕರರಿಗೆ ಹಣದ ಬದಲು ಚಿನ್ನ ನೀಡುತ್ತಿದೆ ಈ ಕಂಪೆನಿ !! | ಹಳೆ ಶಿಲಾಯುಗದ ಸಂಸ್ಕೃತಿಯನ್ನು ನೆನಪಿಸುವ ಈ ಯೋಜನೆಯ ಹಿಂದಿರುವ ಉದ್ದೇಶವೇನು ಗೊತ್ತಾ??
ಉದ್ಯೋಗಿಗಳಿಗೆ ಹಣದ ರೂಪದಲ್ಲಿ ಸಂಬಳ ನೀಡುವುದು ಪದ್ಧತಿ. ಆದರೆ ಈ ಒಂದು ಕಂಪನಿ ಚಿನ್ನದ ರೂಪದಲ್ಲಿ ಸಂಬಳ ನೀಡುವ ಮೂಲಕ ಅಚ್ಚರಿ ಮೂಡಿಸಿದೆ. ಹೌದು. ಈ ನಗದು ಬದಲಿಗೆ ಚಿನ್ನದ ರೂಪದಲ್ಲಿ ಸಂಬಳ ಪಾವತಿಸುವುದಕ್ಕೂ ಕಾರಣವಿದ್ದು, ಉದ್ಯೋಗಿಗಳಿಗೆ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಸಹಾಯವಾಗಲಿ ಎಂಬುದೇ ಮುಖ್ಯ ಉದ್ದೇಶ.
ಉದ್ಯೋಗಿಗಳಿಗೆ ಸಂಬಳವನ್ನು ನಗದು ರೂಪದಲ್ಲಿ ಪಾವತಿಸುವ ಬದಲಿಗೆ ಚಿನ್ನದ ರೂಪದಲ್ಲಿ ಪಾವತಿಸುವುದು ನಮಗೆ ಹಳೇ ಶಿಲಾಯುಗಕ್ಕೆ ಹೋದಂತೆ ಭಾಸವಾಗಬಹುದು. ಆದರೆ, ಯುನೈಟೆಡ್ ಕಿಂಗ್ಡಮ್ನ ರಾಜಧಾನಿ ಲಂಡನ್ನಲ್ಲಿರುವ ಫೈನಾನ್ಶಿಯಲ್ ಸರ್ವೀಸಸ್ ‘ಟ್ಯಾಲಿಮನಿ’ ಕಂಪನಿಯೊಂದು ಈಗಿನ ಅಸ್ಥಿರ ಹಣಕಾಸಿನ ಪರಿಸ್ಥಿತಿಯಲ್ಲಿ ತಮ್ಮ ಉದ್ಯೋಗಿಗಳಲ್ಲಿ ಉಳಿತಾಯ ಮನೋಭಾವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರೋತ್ಸಾಹಿಸಲು ಚಿನ್ನದ ರೂಪದಲ್ಲಿ ಸಂಬಳವನ್ನು ಪಾವತಿಸಲು ಮುಂದಾಗಿದೆ.
ಹೊಸ ಮಾದರಿಯ ಸಂಬಳದ ಪ್ರಾಯೋಗಿಕ ಯೋಜನೆಯ ಭಾಗವಾಗಿ, ಲಂಡನ್ ಮೂಲದ ಟ್ಯಾಲಿಮನಿ ತನ್ನ ಉದ್ಯೋಗಿಗಳಿಗೆ ಪ್ಯಾಕೇಜ್ ನೀಡುತ್ತಿದೆ, ಉದ್ಯೋಗಿಗಳ ಸಂಭಾವನೆಯನ್ನು ಹಣದ ಬದಲಿಗೆ ಚಿನ್ನದಲ್ಲಿ ಸ್ವೀಕರಿಸಲಾಗುತ್ತದೆ. ವಾಸ್ತವವಾಗಿ, ಸಿಇಒ ಕ್ಯಾಮರೂನ್ ಪ್ಯಾರಿ ಅವರು ‘ಸಂಬಳವಾಗಿ ಹಣವನ್ನು ಪಾವತಿಸುವುದರಲ್ಲಿ ಅರ್ಥವಿಲ್ಲ’ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
‘ಟ್ಯಾಲಿಮನಿ ‘ನ ಸಂಸ್ಥೆ ತನ್ನ ಸೇವೆಯಲ್ಲಿ , ಟ್ಯಾಲಿ ಎಂದು ಕರೆಯಲ್ಪಡುವ ಡಿಜಿಟಲ್ ಪ್ರಾಪರ್ಟಿ ನೀಡಲಾಗುತ್ತದೆ. ಇದು ಒಂದು ಮಿಲಿಗ್ರಾಂ ಚಿನ್ನಕ್ಕೆ ಸಮಾನವಾಗಿರುತ್ತದೆ. ಆದ್ದರಿಂದ ಬ್ರಿಟಿಷ್ ಪೌಂಡ್ಗಳಲ್ಲಿ ಎಣಿಸಿದ ಅವರ ಸಂಬಳದ ಬದಲಿಗೆ, ಉದ್ಯೋಗಿಗಳು ಮಿ.ಗ್ರಾಂ ಚಿನ್ನದ ಅಂಕಿಅಂಶವನ್ನು ಸ್ವೀಕರಿಸುತ್ತಾರೆ. ಇದು ಕ್ರಿಪ್ಟೋಕರೆನ್ಸಿಗಳಿಗೆ ಹೋಲುವಂತಿದೆ ಎಂದು ಹೇಳಲಾಗಿದ್ದರೂ, ಕಂಪನಿಯ ಮುಖ್ಯಸ್ಥರ ಪ್ರಕಾರ, ಚಿನ್ನದೊಂದಿಗೆ ಅವರ ಸಂಬಳ ಯೋಜನೆ ಹೆಚ್ಚು ಅರ್ಥಪೂರ್ಣವಾಗಿದೆ ಎನ್ನಲಾಗಿದೆ.
ಕಂಪನಿಯು ಕೇವಲ 20ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಹಾಗಾಗಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೆ ತರುವುದು ಅಷ್ಟು ಕಷ್ಟವಲ್ಲ. ಸದ್ಯ ಈಗ ಮೊದಲ ಹಂತದಲ್ಲಿ ಹಿರಿಯ ಉದ್ಯೋಗಿಗಳಿಗೆ ಪ್ರಾಯೋಗಿಕವಾಗಿ ಚಿನ್ನದ ರೂಪದಲ್ಲಿ ಸಂಬಳವನ್ನು ಪಾವತಿಸಲಾಗುತ್ತದೆ. ಮುಂದಿನ ಹಂತದಲ್ಲಿ ಇದನ್ನು ಎಲ್ಲಾ ಉದ್ಯೋಗಿಗಳಿಗೂ ವಿಸ್ತರಿಸುವ ಚಿಂತನೆಯಿದೆ. ಆದಾಗ್ಯೂ, ಚಿನ್ನದ ರೂಪದಲ್ಲಿ ಸಂಬಳವನ್ನು ಪಡೆಯುವುದು ಉದ್ಯೋಗಿಗಳ ಆಯ್ಕೆಯಾಗಿದೆ. ಅವರಿಗೆ ನಗದು ರೂಪದಲ್ಲೇ ಬೇಕೆಂದರೆ ಅವರು ಅದನ್ನೇ ಆಯ್ಕೆ ಮಾಡಲು ಸ್ವತಂತ್ರರಾಗಿರುತ್ತಾರೆ ಎಂದಿದೆ.
ಚಿನ್ನದ ರೂಪದಲ್ಲಿ ಸಂಬಳ ಪಡೆಯುವುದು ಎಂದರೆ ಭೌತಿಕ ರೂಪದಲ್ಲಿ ಚಿನ್ನದ ನಾಣ್ಯಗಳನ್ನು ಪಡೆಯುವುದಲ್ಲ. ಬದಲಾಗಿ, ಅಂದಿನ ವಿನಿಮಯ ದರದಂತೆ ಚಿನ್ನವನ್ನು ಪೌಂಡ್ಗೆ ವಿನಿಮಯ ಮಾಡಿಕೊಂಡು ನಗದು ಪಡೆಯುವುದಾಗಿದೆ ಎಂದು ಕಂಪನಿ ತಿಳಿಸಿದೆ.
“ಯುನೈಟೆಡ್ ಕಿಂಗ್ಡಮ್ನ ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ನಗದು ರೂಪದಲ್ಲಿ ಸಂಬಳ ಪಾವತಿಸುವುದು ಸೂಕ್ತವಲ್ಲ ಎಂದು ನಾನು ಭಾವಿಸುತ್ತೇನೆ. ಜೀವನ ನಿರ್ವಹಣೆ ವೆಚ್ಚ ಗಗನಕ್ಕೆ ಏರಿದೆ. ನಗದು ರೂಪದಲ್ಲಿ ಸಂಬಳ ನೀಡುವುದು ಗಾಯಕ್ಕೆ ಬ್ಯಾಂಡ್ ಏಡ್ ಹಾಕಿದಂತೆ,” ಎಂದು ‘ಟ್ಯಾಲಿ ಮನಿ’ ಸಿಇಒ ಕೆಮೆರಾನ್ ಪರಿ ಅಭಿಪ್ರಾಯಪಟ್ಟಿದ್ದಾರೆ.
“ಚಿನ್ನವು ನಮ್ಮನ್ನು ಆರ್ಥಿಕ ದುಸ್ಥಿತಿಯಲ್ಲೂ ಕಾಪಾಡುವ ಸಾಧನವಾಗಿದೆ. ಸಹಸ್ರಮಾನಗಳಿಂದಲೂ ಅದು ತನ್ನ ಖರೀದಿ ಸಾಮರ್ಥ್ಯವನ್ನು ಉಳಿಸಿಕೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಪೌಂಡ್ ತನ್ನ ಮೌಲ್ಯ ಕಳೆದುಕೊಳ್ಳುತ್ತಿರುವಾಗ ಚಿನ್ನವು ಹಣದುಬ್ಬರವನ್ನು ಮುಂದೂಡಲು ಜನರಿಗೆ ಉತ್ತಮ ಅವಕಾಶವಾಗಿದೆ,” ಎಂದು ಕೆಮರಾನ್ ಹೇಳಿದ್ದಾರೆ.