ಇನ್ನಿರೋದು ಬರೀ 8 ತಿಂಗ್ಲು ; ಈಗ ಮಂತ್ರಿ ಪಟ್ಟದಲ್ಲಿ ಕೂತ್ರೆ ಕುರ್ಚಿ ಬಿಸಿ ಕೂಡಾ ಆಗಲ್ಲ !!| ಶಾಸಕ ಎಂಪಿ ಕುಮಾರಸ್ವಾಮಿಯ ಅಳಲು
ರಾಜಕೀಯದಲ್ಲಿ ಎಲ್ಲರಿಗೂ ಬೇಕಾಗಿರೋದು ಅಧಿಕಾರದ ಕುರ್ಚಿ ಮಾತ್ರ. ಕುರ್ಚಿಗೋಸ್ಕರ ಏನು ಬೇಕಾದರೂ ಮಾಡಲು ರೆಡಿ ಇರುತ್ತಾರೆ ರಾಜಕೀಯ ನಾಯಕರು. ಹಾಗೆಯೇ ಬಿಜೆಪಿ ಸರ್ಕಾರಕ್ಕೆ ಅಧಿಕಾರಕ್ಕೆ ಬಂದಾಗಿನಿಂದಲೂ ಮಂತ್ರಿಗಿರಿಗಾಗಿ ಹೋರಾಡ್ತಿದ್ದ ಜಿಲ್ಲೆಯ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಸಚಿವ ಸ್ಥಾನದ ಆಸೆಯನ್ನು ಕೈಬಿಟ್ಟಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಈಗ ಸಚಿವ ಸ್ಥಾನ ಸಿಕ್ಕರೆ ಏನು ಮಾಡೋದು. ಕುರ್ಚಿ ಬಿಸಿ ಮಾಡಬಹುದು ಅಷ್ಟೇ. ಕುರ್ಚಿಯೂ ಕೂಡ ಬಿಸಿ ಆಗಲ್ಲ ಎಂದು ಸಚಿವನಾಗುವ ಆಸೆಯನ್ನು ಕೈಬಿಟ್ಟಿದ್ದಾರೆ. ಈಗ ಸಚಿವ ಸ್ಥಾನ ಸಿಕ್ಕರೂ ಸಿಗೋದು ಕೇವಲ ಎಂಟು ತಿಂಗಳು ಅಷ್ಟೇ. ಈ ಎಂಟು ತಿಂಗಳಲ್ಲಿ ಯಾವ ಕ್ರಾಂತಿಕಾರಿ ಅಭಿವೃದ್ಧಿಯನ್ನೂ ಮಾಡಲು ಆಗುವುದಿಲ್ಲ. ಸಚಿವ ಸಂಪುಟ ವಿಸ್ತರಣೆ ವೇಸ್ಟ್. ಇದರಿಂದ ಆಸೆ ಇರುವವರಿಗಷ್ಟೇ ಅನುಕೂಲವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಮೂರು ಬಾರಿ ಶಾಸಕರಾಗಿರುವ ಕುಮಾರಸ್ವಾಮಿ ಮಂತ್ರಿಗಿರಿಗಾಗಿ ಭಾರೀ ಹೋರಾಡಿದ್ದರು, ಲಾಬಿ ಕೂಡ ನಡೆಸಿದ್ದರು. ಬಲಗೈ ಸಮುದಾಯಕ್ಕೆ ಸೇರಿದ ನಮಗೂ ಮಂತ್ರಿಗಿರಿ ಕೊಡಬೇಕೆಂದು ಮನವಿ ಮಾಡಿದ್ದರು. ಬಿಜೆಪಿ ಸರ್ಕಾರ ಬಂದ ಬಳಿಕ ಸಚಿವ ಸಂಪುಟ ವಿಸ್ತರಣೆಯಾದ ಮೂರು ಬಾರಿ ಮಿನಿಸ್ಟರ್ ಪೋಸ್ಟ್‌ಗಾಗಿ ಲಾಬಿ ನಡೆಸಿದ್ದರು. ಆದರೆ, ಈಗ ಯಾಕೋ ಮಿನಿಸ್ಟರ್ ಆಗುವ ಆಸೆಯನ್ನು ಕೈಬಿಟ್ಟಿದ್ದಾರೆ. ಸಚಿವ ಸ್ಥಾನ ನೀಡಿ ಎಂದು ಕೇಳಲ್ಲ, ಆಸೆ ಇರುವವರಿಗೆ ಕೊಡಲಿ. ಯಾವುದೇ ಒತ್ತಡವನ್ನೂ ಹಾಕಲ್ಲ. ಕ್ಷೇತ್ರದಲ್ಲಿ ತುಂಬಾ ಕೆಲಸ ಇದೆ. ಸಚಿವ ಸ್ಥಾನ ನೀಡೋದು ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಹತಾಶ ನುಡಿಯನ್ನು ಹೊರಹಾಕಿದ್ದಾರೆ.
ನಾನು ಮಂತ್ರಿಗಿರಿಗೆ ಲಾಬಿ ಮಾಡಲು ದೆಹಲಿಗೆ ಹೋಗಿಲ್ಲ. ಬೇರೆ ಕೆಲಸದ ನಿಮಿತ್ತ ಗಡ್ಕರಿ ಅವರನ್ನು ಭೇಟಿ ಮಾಡಬೇಕಿತ್ತು ಅದಕ್ಕೆ ಹೋಗಿದ್ದೆ ಎಂದಿದ್ದಾರೆ. ಈ ಹಿಂದೆ ಎರಡು ಬಾರಿ ಸಚಿವ ಸಂಪುಟದ ವಿಸ್ತರಣೆಯ ಬಳಿಕ ಪ್ರಮಾಣ ವಚನದ ಸಂದರ್ಭದಲ್ಲೂ ಎಂ.ಪಿ ಕುಮಾರಸ್ವಾಮಿ ವಿವಿಧ ಕಾರಣ ನೀಡಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಪ್ರತಿಬಾರಿಯೂ ಸಚಿವ ಸ್ಥಾನದ ಕಸರತ್ತು ನಡೆಯುವಾಗ ನಾನೂ ಆಕಾಂಕ್ಷಿ ಎಂದು ಹೇಳಿಕೆ ನೀಡುತ್ತಿದ್ದ ಎಂ.ಪಿ. ಕುಮಾರಸ್ವಾಮಿ ಈ ಬಾರಿ ಹೋರಾಟಕ್ಕೂ ಮುನ್ನವೇ ಶಸ್ತ್ರ ತ್ಯಾಗ ಮಾಡಿದ್ದಂತೂ ನಿಜ.