ತಾಜ್ ಮಹಲ್ ಕುರಿತು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಉಚ್ಛ ನ್ಯಾಯಾಲಯ !! | ನಾಳೆ ಕೋರ್ಟ್ ನ ಚೇಂಬರ್ ಒಳಗೆ ಏನಿದೆ ಎಂದು ಕೂಡ ಕೇಳುತ್ತೀರಿ ಎಂದು ಛೀಮಾರಿ ಹಾಕಿದ ಹೈಕೋರ್ಟ್
ಇತ್ತೀಚಿಗೆ ತಾಜ್ ಮಹಲ್ ನಲ್ಲಿ ಮುಚ್ಚಿರುವ 22 ಕೋಣೆಗಳನ್ನು ತೆರೆಯಬೇಕೆಂಬ ಆಗ್ರಹ ಕೇಳಿ ಬಂದಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದರು. ಅಲಹಾಬಾದ್ ಕೋರ್ಟ್ ಗೆ ಈ ಬಗ್ಗೆ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಕೋರ್ಟ್ ಇದೀಗ ವಜಾಗೊಳಿಸಿದೆ.
ಹಿಂದೂ ದೇವತೆಗಳ ವಿಗ್ರಹಗಳು ಇದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಾಜ್ ಮಹಲ್‍ನಲ್ಲಿ ಮುಚ್ಚಿರುವ 22 ಬಾಗಿಲುಗಳನ್ನು ತೆರೆದು ತನಿಖೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡುವಂತೆ ಕೋರಿ ಡಾ. ರಜನೀಶ್ ಸಿಂಗ್ ಅಲಹಾಬಾದ್ ಹೈಕೋರ್ಟ್‍ಗೆ ಮನವಿ ಸಲ್ಲಿಸಿದ್ದರು.
ಹಿಂದೂ ದೇವತೆಗಳ ವಿಗ್ರಹಗಳನ್ನು ಮುಚ್ಚಿದ ಬಾಗಿಲುಗಳ ಹಿಂದೆ ಇರಿಸಿ ಬೀಗ ಹಾಕಲಾಗಿದೆ. ತಾಜ್ ಮಹಲ್ ಶಿವ ದೇವಾಲಯವಾಗಿತ್ತು. ಇದೀಗ ಮುಚ್ಚಿರುವ 22 ಕೊಠಡಿಗಳನ್ನು ತೆರೆಯಲು ಅವಕಾಶ ಕೊಡಬೇಕು ಎಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಅಲಹಾಬಾದ್‍ನ ದ್ವಿಸದಸ್ಯ ಪೀಠ, ಇದೀಗ ತಾಜ್ ಮಹಲ್ ಬಗ್ಗೆ ಪ್ರಶ್ನೆ ಎತ್ತಿದ್ದೀರಿ ಮುಂದೊಂದು ದಿನ ಹೈಕೋರ್ಟ್ ನ ಕೋರ್ಟ್ ಚೇಂಬರ್ ಒಳಗೆ ಏನಿದೆ ಎಂದು ಕೇಳುತ್ತೀರಿ ಎಂದು ಛೀಮಾರಿ ಹಾಕಿ ಅರ್ಜಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದಿದೆ.
ಯಾವುದೇ ಹಕ್ಕುಗಳ ಉಲ್ಲಂಘನೆಯಾಗದ ಹೊರತು ಕೊಠಡಿಗಳನ್ನು ತೆರೆಯಲು ಆದೇಶ ನೀಡಲು ಸಾಧ್ಯವಿಲ್ಲ. ನಾವು ಯಾವ ರೀತಿಯ ತೀರ್ಪು ನೀಡಬೇಕೆಂದು ನೀವು ಬಯಸುತ್ತೀರಿ? ತಾಜ್ ಮಹಲ್ ನಿರ್ಮಿಸಿದವರು ಯಾರು? ಐತಿಹಾಸಿಕ ಸಂಗತಿಗಳಿಗೆ ಹೋಗಬೇಡಿ. ಹಕ್ಕುಗಳನ್ನು ಉಲ್ಲಂಘಿಸಿದಾಗ ಮಾತ್ರ ಪ್ರಶ್ನಿಸಬಹುದು. ನಿಮ್ಮ ಯಾವ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರಿಗೆ ಕೋರ್ಟ್ ಪ್ರಶ್ನಿಸಿದೆ.
ತಾಜ್ ಮಹಲ್ ಸ್ಮಾರಕವು ಹಳೆಯ ಶಿವ ದೇವಾಲಯವಾಗಿದೆ ಎಂದು ಕೆಲ ಇತಿಹಾಸಕಾರರು ಮತ್ತು ಹಿಂದೂಪರ ಸಂಘಟನೆಯವರು ಹೇಳುತ್ತಿದ್ದಾರೆ ಎಂದು ಅಲಹಾಬಾದ್ ಕೋರ್ಟ್ ಗೆ ಸಲ್ಲಿಸಲಾದ ಅರ್ಜಿಯಲ್ಲಿ ತಿಳಿಸಲಾಗಿತ್ತು. ಸಂತರು ಹಾಗೂ ಅನೇಕ ಇತಿಹಾಸಕಾರರು ತಾಜ್‍ಮಹಲ್ ಶಿವ ದೇವಾಲಯ ಎಂದು ಹೇಳುತ್ತಿದ್ದಾರೆ. ಆದರೆ ಕೆಲ ಇತಿಹಾಸಕಾರರು ಇದನ್ನು ಮೊಘಲ್ ಚಕ್ರವರ್ತಿ ಷಹಜಹಾನ್ ನಿರ್ಮಿಸಿದ ಎಂದು ನಂಬುತ್ತಾರೆ. ‘ತೇಜೋ ಮಹಾಲಯ’ ನಂತರದ ದಿನಗಳಲ್ಲಿ ತಾಜ್ ಮಹಲ್ ಆಗಿದೆ ಎಂದು ಹೇಳಲಾಗುತ್ತಿದೆ ಎಂದು ಈ ಕುರಿತು ಮನವಿ ಸಲ್ಲಿಸಲಾಗಿತ್ತು.