ವಿಮಾನ ನಿಲ್ದಾಣದ ರನ್ ವೇ ನಲ್ಲಿ ಧಗಧಗನೆ ಹೊತ್ತಿ ಉರಿದ ವಿಮಾನ !! | ಅದೃಷ್ಟವಶಾತ್ ಪ್ರಯಾಣಿಕರು ಪಾರು-ವೀಡಿಯೋ ವೈರಲ್
ವಿಮಾನ ನಿಲ್ದಾಣದ ರನ್‌ನಲ್ಲಿ ದಿಢೀರ್ ತಿರುವು ಪಡೆದುಕೊಂಡ ಟಿಬೆಟ್ ಏರ್ ಲೈನ್ಸ್ ವಿಮಾನವೊಂದರಲ್ಲಿ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿದಿರುವ ಆತಂಕಕಾರಿ ಘಟನೆ ಚೀನಾದಲ್ಲಿ ನಡೆದಿದ್ದು, ಘಟನೆಯ ಭಯಾನಕ ವೀಡಿಯೋ ವೈರಲ್ ಆಗಿದೆ.
ಹೌದು. ಬೆಂಕಿ ಹೊತ್ತಿ ಉರಿಯುತ್ತಿದ್ದಂತೆಯೇ ಸಿಬ್ಬಂದಿ ಸೇರಿದಂತೆ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಟಿಬೆಟ್ ಏರ್‌ಲೈನ್ಸ್ ತಿಳಿಸಿದೆ. ವಿಮಾನವು 9 ಸಿಬ್ಬಂದಿ ಹಾಗೂ 113 ಪ್ರಯಾಣಿಕರು ಹೊತ್ತು ಚೀನಾದ ನೈಋತ್ಯ ನಗರವಾದ ಚಾಂಗಿಂಗ್ ನಿಂದ ಟಿಬೆಟ್‌ನ ನೈಂಗ್‌ಚಿಗೆ ಪ್ರಯಾಣ ಆರಂಭಿಸಿತ್ತು. ಆದರೆ, ವಿಮಾನದಲ್ಲಿನ ದೋಷವನ್ನು ಪತ್ತೆ ಹಚ್ಚಿದ ಸಿಬ್ಬಂದಿ ದಿಢೀರನೇ ಟೇಕಾಫ್ ರದ್ದು ಮಾಡಿದರು. ಇದರಿಂದ ಚಾಲನೆಯಲ್ಲಿದ್ದ ವಿಮಾನವು ರನ್‌ವೇಯ್ ನಲ್ಲಿ ದಿಢೀರ್ ತಿರುವು ಪಡೆದುಕೊಂಡಿದ್ದರಿಂದ ಬೆಂಕಿ ಹೊತ್ತಿಕೊಂಡಿತು ಎಂದು ಟಿಬೆಟ್ ಏರ್‌ಲೈನ್ಸ್ ಕಂಪನಿ ತಿಳಿಸಿದೆ.
ಭಯಭೀತರಾದ ಪ್ರಯಾಣಿಕರು ಸ್ಥಳದಿಂದ ಓಡಿಹೋಗುತ್ತಿದ್ದಂತೆ ಬೆಂಕಿಯ ಜ್ವಾಲೆಯು ವಿಮಾನದ ರೆಕ್ಕೆಗಳನ್ನು ಆವರಿಸಿರುವ ವೀಡಿಯೋವನ್ನು ಚೀನಾದ ಮಾಧ್ಯಮವೊಂದು ಪ್ರಸಾರ ಮಾಡಿವೆ. ಈ ಘಟನೆಯಲ್ಲಿ ಸಿಬ್ಬಂದಿ ಸೇರಿದಂತೆ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ. ಕೆಲವರಿಗೆ ಸಣ್ಣ ಪ್ರಮಾಣದಲ್ಲಿ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾರ್ಚ್‌ನಲ್ಲಿ ಕುನ್‌ಮಿಂಗ್‌ನಿಂದ ಗುವಾಂಗ್‌ಝಗೆ ಪ್ರಯಾಣಿಸುತ್ತಿದ್ದ ಚೀನಾ ಈಸ್ಟನ್ ವಿಮಾನವು 29,000 ಅಡಿಗಳಿಂದ ದಿಢೀರನೇ ಅರಣ್ಯದ ನಡುವೆ ಬಿದ್ದು, ವಿಮಾನದಲ್ಲಿದ್ದ ಎಲ್ಲಾ 131 ಜನರು ಸಾವನ್ನಪ್ಪಿದ ಭೀಕರ ಘಟನೆ ಮಾಸುವ ಮುನ್ನವೇ ಈ ಘಟನೆ ನಡೆದಿದ್ದು, ಜನರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.