ಆಂಡ್ರಾಯ್ಡ್ ಫೋನ್ ನಲ್ಲಿ ಗೌಪ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಕ್ರಮಗಳಿಗೆ ಮುಂದಾದ ಗೂಗಲ್ !!

ಆಂಡ್ರಾಯ್ಡ್ ಫೋನ್ ನಲ್ಲಿ ಸುರಕ್ಷತೆ ಮತ್ತು ಗೌಪ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗೂಗಲ್‌ ಹಲವು ಕ್ರಮಗಳಿಗೆ ಮುಂದಾಗಿದ್ದು, ಕಾಲ್‌ ರೆಕಾರ್ಡಿಂಗ್‌ ಗೆ ಅವಕಾಶ ನೀಡುವ ಅಪ್ಲಿಕೇಷನ್‌ಗಳನ್ನು ನಿರ್ಬಂಧಿಸಿದೆ.

ಬಹಳ ದಿನಗಳಿಂದಲೂ ಗೂಗಲ್ ತನ್ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಥರ್ಡ್ ಪಾರ್ಟಿ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್​ಗಳನ್ನು ಮಿತಿಗೊಳಿಸಲು ಪ್ರಯತ್ನಿಸುತ್ತಿತ್ತು. ಇದೀಗ ಇಂದಿನಿಂದಲೇ ಆಂಡ್ರಾಯ್ಡ್ ಫೋನ್‌ ಬಳಕೆದಾರರು ಆಪ್‌ ಬಳಸಿ ಕರೆ ರೆಕಾರ್ಡ್‌ ಮಾಡುವುದು ಸಾಧ್ಯವಾಗುವುದಿಲ್ಲ.’ಥರ್ಡ್ ಪಾರ್ಟಿ ವ್ಯಕ್ತಿಗಳಿಂದ ಅಭಿವೃದ್ಧಿಪಡಿಸಲಾದ ಧ್ವನಿ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳನ್ನು ಬಳಕೆದಾರರ ಗೌಪ್ಯತೆಯ ಮೇಲೆ ಆಕ್ರಮಣ’ ಎಂದು ಪರಿಗಣಿಸಿ ಗೂಗಲ್ ಇಂತಹದೊಂದು ಮಹತ್ತರ ಬದಲಾವಣೆಗೆ ಕೈ ಹಾಕಿದೆ ಎಂದು ಹೇಳಲಾಗುತ್ತಿದೆ.

ಗೂಗಲ್‌ ತನ್ನ ಪ್ಲೇ ಸ್ಟೋರ್‌ನಲ್ಲಿ ಎಲ್ಲಾ ಥರ್ಡ್‌ ಪಾರ್ಟಿ ಕಾಲ್‌ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಲಿದೆಯಾ ಅಥವಾ ಪ್ಲಾಟ್‌ಫಾರ್ಮ್‌ನಿಂದ ತಮ್ಮ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲು ಡೆವಲಪರ್‌ಗಳನ್ನು ಕೇಳುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಇದರಲ್ಲಿ ಟ್ರೂ ಕಾಲರ್ ಕೂಡ ಒಳಗೊಂಡಿದೆ. ಟ್ರೂ ಕಾಲರ್‌ ಈಗಾಗಲೇ ಗ್ರಾಹಕರ ಬೇಡಿಕೆಯಂತೆ ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಕರೆ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಆದರೆ ಇದೀಗ ಗೂಗಲ್‌ ಡೆವಲಪರ್ ಪ್ರೋಗ್ರಾಂ ನೀತಿಗಳ ಪ್ರಕಾರ,ಇನ್ಮುಂದೆ ಟ್ರೂ ಕಾಲರ್‌ ಕಾಲ್‌ ರೆಕಾರ್ಡಿಂಗ್ ಅನ್ನು ಸ್ಟಾಪ್‌ ಮಾಡಲಿದೆ.

ಆದರೆ ಎಲ್ಲಾ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳು ಪ್ಲಾಟ್‌ಫಾರ್ಮ್‌ನಿಂದ ಬ್ಯಾನ್‌ ಆಗುವುದಿಲ್ಲ. ಅಂದರೆ ಒನ್‌ಪ್ಲಸ್‌, ಶಿಯೋಮಿ ಮತ್ತು ಸ್ಯಾಮ್‌ಸಂಗ್‌ ಕಂಪೆನಿಗಳು ನೀಡುವ ಇಂಟರ್‌ಬಿಲ್ಟ್‌ ಕಾಲ್‌ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳು ಬ್ಯಾನ್‌ ಆಗುವುದಿಲ್ಲ. ಇದಲ್ಲದೆ ಕೆಲವು ಆಯ್ದ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್‌ನ ಸ್ವಂತ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್ ಸಹ ಲಭ್ಯವಿರುತ್ತದೆ.

Leave A Reply