ಸುರತ್ಕಲ್: ಬೈಕ್ ಗೆ ಕಾರು ಡಿಕ್ಕಿ ಹೊಡೆದು ಸವಾರ ಮೃತ್ಯು
ಬೈಕ್ ಗೆ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣೆ ಬಳಿ ನಡೆದಿದೆ.
ರಮೇಶ್ ಕುಮಾರ್ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಆರೋಪಿ ಕಾರು ಚಾಲಕ ದರ್ಶನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ರಮೇಶ್ ಕುಮಾರ್ ಅವರು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಗೋವಿಂದ ದಾಸ ವೃತ್ತದ ಬಳಿ ರಾ.ಹೆದ್ದಾರಿಯಿಂದ ಮಹಾಲಿಂಗೇಶ್ವರ ಶಾಲೆಯ ಬಳಿ ತನ್ನ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಮಂಗಳೂರು ಕಡೆಯಿಂದ ಸುರತ್ಕಲ್ ಕಡೆ ದರ್ಶನ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.
ರಸ್ತೆಗೆ ಎಸೆಯಲ್ಪಟ್ಟ ರಮೇಶ್ ಅವರನ್ನು ಸ್ಥಳೀಯರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ರಮೇಶ ಮೃತ ಪಟ್ಟಿದ್ದರು ಎಂದು ತಿಳಿದು ಬಂದಿದೆ.
ಈ ಸಂಬಂಧ ರೋಶನ್ ಪ್ರಸಾದ್ ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರು ಉತ್ತರ ಸಂಚಾರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.