ಕೊತ ಕೊತ ಕುದಿಯುತ್ತಿದೆ ಶ್ರೀಲಂಕಾ !! | ಸರ್ಕಾರದ ಬೆಂಬಲಿಗನನ್ನು ಬಸ್ ನಿಂದ ಕೆಳಗಿಳಿಸಿ ಕಸದಂತೆ ಡಸ್ಟ್ ಬಿನ್ ಗೆ ಎಸೆದ ಆಕ್ರೋಶಿತರು

ಶ್ರೀಲಂಕಾದ ಪರಿಸ್ಥಿತಿ ತುಂಬಾನೇ ಹದಗೆಟ್ಟಿದೆ. ಆರ್ಥಿಕ ಬಿಕ್ಕಟ್ಟಿನ ಕಾರಣದಿಂದಾಗಿ ಶ್ರೀಲಂಕಾದಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆಡಳಿತದ ವಿರುದ್ಧ ರೊಚ್ಚಿಗೆದ್ದಿರುವ ಪ್ರತಿಭಟನಾಕಾರರು ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದ್ದಾರೆ. ಜನರು ರೋಷಾವೇಷಕ್ಕೆ ಬೆಚ್ಚಿದ ಪ್ರಧಾನಿ ಮಹಿಂದಾ ರಾಜಪಕ್ಸ ಸೋಮವಾರ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

 

ಈ ನಡುವೆ ದೇಶಾದ್ಯಂತ ಕಳೆದ ಒಂದು ವಾರದಿಂದ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಅನೇಕ ಸಾವು-ನೋವು, ಆಸ್ತಿ-ಪಾಸ್ತಿ ನಷ್ಟ ಸಂಭವಿಸಿದೆ. ದೇಶದಲ್ಲಿ ಹಿಂಸಾಚಾರದಿಂದಾಗಿ ಐದು ಮಂದಿ ಸಾವನ್ನಪ್ಪಿದ್ದು, 225 ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ.

ಕೊಲಂಬೊಗೆ ಪ್ರಯಾಣಿಸಲು ರಾಜಪಕ್ಸ ಬೆಂಬಲಿಗರು ಬಳಸುತ್ತಿದ್ದ ಹತ್ತಾರು ಬಸ್‌ಗಳಿಗೆ ದೇಶದಾದ್ಯಂತ ಬೆಂಕಿ ಹಚ್ಚಲಾಯಿತು. ಮಹಾರಾಗಮಾದ ಉಪನಗರದಲ್ಲಿ ಜನಸಮೂಹವು ಸರ್ಕಾರಿ ಪರ ಗುಂಪಿನ ನಾಯಕನನ್ನು ಬಸ್‌ನಿಂದ ಬಲವಂತವಾಗಿ ಕೆಳಗಿಳಿಸಿ ಕಸ ಎಸೆದಂತೆ ಕಸದ ಗಾಡಿಗೆ ಎಸೆದಿದ್ದಾರೆ. ಅದರ ಮೊದಲು ವಾಹನವನ್ನು ಬುಲ್ಡೋಜರ್‌ನಿಂದ ಜಖಂಗೊಳಿಸಿದರು.

ಏಪ್ರಿಲ್ 9 ರಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಸರ್ಕಾರಿ ವಿರೋಧಿ ಪ್ರತಿಭಟನಾಕಾರರು, ನಿರ್ಗಮಿತ ಪ್ರಧಾನ ಮಂತ್ರಿ ಮಹಿಂದಾ ರಾಜಪಕ್ಸ ಅವರ ಬೆಂಬಲಿಗರಿಂದ ದಾಳಿ ನಂತರ ಪ್ರತೀಕಾರ ನಡೆಸಲು ಮುಂದಾದರು. ಆಕ್ರೋಶಗೊಂಡ ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಟೆಂಪಲ್ ಟ್ರೀಸ್ ನಿವಾಸದ ಬಳಿಯ ಕೆರೆಯೊಂದಕ್ಕೆ ಹತ್ತಾರು ಮಂದಿಯನ್ನು ತಳ್ಳಿ ಆಕ್ರೋಶ ಹೊರಕಾಕಿದರು. ಕೆರೆಗೆ ತಳ್ಳಲ್ಪಟ್ಟವರನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅದಲ್ಲದೆ ಪ್ರತಿಭಟನಾಕಾರರ ಮೇಲೆ ಸಂಸದರೋರ್ವ ಗುಂಡು ಹಾರಿಸಿದ್ದರು. ಈ ವೇಳೆ 27 ವರ್ಷದ ವ್ಯಕ್ತಿ ಗುಂಡಿಗೆ ಬಲಿಯಾಗಿ, ಇಬ್ಬರು ಗಾಯಗೊಂಡರು. ಘಟನೆ ನಂತರ ಸಂಸದರು ತಾವೇ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಅವರನ್ನು ಕೊಲೆ ಮಾಡಲಾಗಿದೆ ಎಂದು ಪಕ್ಷ ಆರೋಪಿಸಿದೆ. ಶಾಸಕರ ಅಂಗರಕ್ಷಕ ಕೂಡ ಸಾವನ್ನಪ್ಪಿದ್ದಾನೆ. ಅಲ್ಲಿ ಏನಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಕರ್ಫ್ಯೂ ಹೊರತಾಗಿಯೂ ಆಡಳಿತ ಪಕ್ಷದ ಉನ್ನತ ರಾಜಕಾರಣಿಗಳ ಕನಿಷ್ಠ 41 ಮನೆಗಳನ್ನು ರಾತ್ರಿಯಿಡೀ ಸುಟ್ಟು ಹಾಕಲಾಗಿದೆ. ಆ ಮನೆಗಳಲ್ಲಿ ನಿಲ್ಲಿಸಿದ್ದ ನೂರಾರು ದ್ವಿಚಕ್ರ ವಾಹನಗಳೂ ಸುಟ್ಟು ಕರಕಲಾಗಿವೆ. ಮೆಡಾ ಮುಲಾನಾ ಎಂಬ ಆಡಳಿತ ಕುಟುಂಬದ ಪೂರ್ವಜರ ಗ್ರಾಮದಲ್ಲಿರುವ ರಾಜಪಕ್ಸ ಮನೆತನದವರ ಕುರಿತಾದ ವಸ್ತುಸಂಗ್ರಹಾಲಯದ ಮೇಲೆ ಗುಂಪೊಂದು ದಾಳಿ ನಡೆಸಿ ಅದನ್ನು ನೆಲಸಮಗೊಳಿಸಿದೆ. ರಾಜಪಕ್ಸ ಪೋಷಕರ ಎರಡು ಮೇಣದ ಪ್ರತಿಮೆಗಳನ್ನು ಧ್ವಂಸಗೊಳಿಸಲಾಗಿದೆ. ವಾಯುವ್ಯ ಪಟ್ಟಣವಾದ ಕುರುನೆಗಾಲದಲ್ಲಿ ರಾಜಪಕ್ಸರ ರಾಜಕೀಯ ಕಚೇರಿಯೂ ಸಹ ನಾಶವಾಗಿದೆ.

Leave A Reply

Your email address will not be published.