ಹೊಸದಾಗಿ ಪ್ರಯಾಣಿಕ ಸ್ನೇಹಿ ಮಾರ್ಗಸೂಚಿಗಳನ್ನು ಹೊರಡಿಸಿದ ಭಾರತೀಯ ರೈಲ್ವೆ|ರಾತ್ರಿವೇಳೆ ಪ್ರಯಾಣಿಕರು ಏರಿದ ಧ್ವನಿಯಲ್ಲಿ ಮೊಬೈಲ್ ನಲ್ಲಿ ಮಾತನಾಡುವಂತಿಲ್ಲ

ನವದೆಹಲಿ: ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಖಾತರಿಪಡಿಸುವ ಉದ್ದೇಶದಿಂದ ಭಾರತೀಯ ರೈಲ್ವೆ ಹೊಸದಾಗಿ ಪ್ರಯಾಣಿಕ ಸ್ನೇಹಿ ಮಾರ್ಗಸೂಚಿಗಳನ್ನು ಹೊರಡಿಸಿದೆ.

ರೈಲ್ವೆ ಪ್ರಯಾಣಿಕರು ರಾತ್ರಿ ಪ್ರಯಾಣದ ಸಂದರ್ಭದಲ್ಲಿ ಮೊಬೈಲ್‌ನಲ್ಲಿ ಏರಿದ ಧ್ವನಿಯಲ್ಲಿ ಮಾತನಾಡುವುದನ್ನು ಅಥವಾ ‘ಲೌಡ್‌ ಸ್ಪೀಕರ್‌’ನಲ್ಲಿ ಸಂಗೀತ ಕೇಳುವುದನ್ನು ಭಾರತೀಯ ರೈಲ್ವೆ ನಿಷೇಧಿಸಿದೆ. ಇದರ ಪ್ರಕಾರ, ಪ್ರಯಾಣಿಕರು ದೂರು ನೀಡಿದರೆ, ಆ ಸಮಸ್ಯೆ ಪರಿಹರಿಸುವ ಜವಾಬ್ದಾರಿಯನ್ನು ರೈಲ್ವೆ ತಪಾಸಣೆ ಸಿಬ್ಬಂದಿ, ಆರ್‌ಪಿಎಫ್, ಎಲೆಕ್ಟ್ರಿಷಿಯನ್, ಅಡುಗೆ ಮತ್ತು ನಿರ್ವಹಣೆ ಸಿಬ್ಬಂದಿ ಹೊಂದಿರುತ್ತಾರೆ ಎಂದು ರೈಲ್ವೆ ತಿಳಿಸಿದೆ.

ರಾತ್ರಿ 10 ಗಂಟೆಯ ನಂತರ ಪ್ರಯಾಣಿಕರು ಮೊಬೈಲ್‌ನಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ರೈಲ್ವೆ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಈ ಷರತ್ತುಗಳ ನಡುವೆಯೂ 60 ವರ್ಷ ಮೇಲಿನ ಹಿರಿಯ ನಾಗರಿಕರು, ಅಂಗವಿಕಲರು ಮತ್ತು ಒಂಟಿ ಮಹಿಳಾ ಪ್ರಯಾಣಿಕರಿಗೆ ರೈಲ್ವೆ ಸಿಬ್ಬಂದಿ ಅಗತ್ಯ ನೆರವು ನೀಡುತ್ತಾರೆ.

ರೈಲಿನಲ್ಲಿ ಏರಿದ ಧ್ವನಿಯಲ್ಲಿ ಮೊಬೈಲ್‌ನಲ್ಲಿ ಮಾತನಾಡದಂತೆ ಹಾಗೂ ಇಯರ್‌ ಫೋನ್‌ ಇಲ್ಲದೆ ಸಂಗೀತ ಕೇಳದಂತೆ ಪ್ರಯಾಣಿಕರಿಗೆ ರೈಲ್ವೆ ವಲಯ ಮಟ್ಟದಲ್ಲಿ ಸಲಹೆಗಳನ್ನು ಟಿಕೆಟ್‌ ಪರಿಶೀಲಕರು ಮತ್ತು ಇತರ ರೈಲ್ವೆ ಸಿಬ್ಬಂದಿ ನೀಡಬೇಕು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

Leave A Reply

Your email address will not be published.