ಹಿಜಾಬ್ ಆದೇಶ ಕುರಿತು ಕಳವಳ ವ್ಯಕ್ತಪಡಿಸಿದ ಅಮೆರಿಕ !! | ಅಂತರಾಷ್ಟ್ರೀಯ ಸಂಬಂಧ ಹದಗೆಡುತ್ತದೆ ಎಂದು ಎಚ್ಚರಿಕೆ ನೀಡಿದ ದೊಡ್ಡಣ್ಣ
ಮಹಿಳೆಯರು ಹಿಜಾಬ್ ಧರಿಸುವ ಕುರಿತು ತಾಲಿಬಾನ್ ಹೊರಡಿಸಿರುವ ಆದೇಶಕ್ಕೆ ಕಳವಳ ವ್ಯಕ್ತಪಡಿಸಿರುವ ಅಮೆರಿಕ, ಮಹಿಳೆಯರ ಹಕ್ಕಿನ ವಿಚಾರವಾಗಿ ತಾಲಿಬಾನ್ ತೆಗೆದುಕೊಂಡಿರುವ ನಿರ್ಧಾರವು ಅಂತಾರಾಷ್ಟ್ರೀಯ ಸಮುದಾಯದೊಂದಿಗಿನ ಅವರ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದೆ.
ಅಫ್ಘಾನಿಸ್ತಾನದ ಮಹಿಳೆಯರು ತಲೆಯಿಂದ ಕಾಲಿನವರೆಗೂ ಮುಚ್ಚುವಂತೆ ಹಿಜಾಬ್ ಧರಿಸಬೇಕೆಂದು ತಾಲಿಬಾನ್ ಹೊರಡಿಸಿರುವ ಆದೇಶವು ಮಹಿಳೆಯರ ಹಕ್ಕಿನ ಉಲ್ಲಂಘನೆ ಎಂದು ಅಫ್ಘಾನಿಸ್ತಾನದ ಯುನೈಟೆಡ್ ಸ್ಟೇಟ್ಸ್ ವಿಶೇಷ ಪ್ರತಿನಿಧಿ ಥಾಮಸ್ ವೆಸ್ಟ್ ಹೇಳಿದ್ದಾರೆ.
ಶಿಕ್ಷಣ ಮತ್ತು ಕೆಲಸಕ್ಕೆ ಹೆಣ್ಣುಮಕ್ಕಳ ಪ್ರವೇಶದ ಮೇಲಿನ ನಿರಂತರ ನಿಷೇಧ, ಚಟುವಟಿಕೆಯ ಸ್ವಾತಂತ್ರ್ಯದ ಮೇಲಿನ ನಿರ್ಬಂಧ ಮತ್ತು ಶಾಂತಿಯುತ ಪ್ರತಿಭಟನಾಕಾರರನ್ನು ಗುರಿಯಾಗಿಸುವುದು ಸೇರಿದಂತೆ ತಾಲಿಬಾನ್‌ನ ಆಕ್ಷೇಪಾರ್ಹ ನಡೆಗೆ ಅಮೆರಿಕ ಟೀಕೆ ವ್ಯಕ್ತಪಡಿಸಿದೆ. ಮಹಿಳೆಯರ ಬಗೆಗಿನ ತಾಲಿಬಾನ್‌ನ ನೀತಿಗಳು ಮಾನವ ಹಕ್ಕುಗಳಿಗೆ ಅಪಚಾರವಾಗಿದೆ. ಇದರಿಂದ ಅಂತಾರಾಷ್ಟ್ರೀಯ ಸಮುದಾಯದೊಂದಿಗಿನ ತಾಲಿಬಾನ್ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ತಲೆಯಿಂದ ಕಾಲಿನವರೆಗೂ ಮುಚ್ಚಿಕೊಳ್ಳುವಂತೆ ಬುರ್ಖಾವನ್ನು ಧರಿಸುವಂತೆ ಆದೇಶ ಹೊರಡಿಸಿದೆ. ನಿಯಮ ಉಲ್ಲಂಘಿಸಿದರೆ ಕುಟುಂಬದ ಪುರುಷ ಸದಸ್ಯನನ್ನು ಮೂರು ದಿನಗಳ ಕಾಲ ಜೈಲಿನಲ್ಲಿಡಲಾಗುವುದು ಎಂದು ತಾಲಿಬಾನ್ ಘೋಷಿಸಿತ್ತು.
ತಾಲಿಬಾನ್ ತೀರ್ಪಿನ ಪ್ರಕಾರ, ಮಹಿಳೆ ಹಿಜಾಬ್ ಧರಿಸದಿದ್ದರೆ, ಮೊದಲು ಆಕೆಯ ಪೋಷಕರಿಗೆ ಎಚ್ಚರಿಕೆ ನೀಡಲಾಗುತ್ತದೆ. ಆಕೆ ಮತ್ತೆ ತಪ್ಪಿತಸ್ಥಳೆಂದು ಸಾಬೀತಾದರೆ ಆಕೆಯ ಮನೆಯ ಪುರುಷ ಸದಸ್ಯನನ್ನು ಕರೆಸಿ ಸಲಹೆ ನೀಡಲಾಗುವುದು. ಈ ತಪ್ಪು ಪುನರಾವರ್ತನೆಯಾದರೆ ಪುರುಷ ಸದಸ್ಯನನ್ನು ಮೂರು ದಿನಗಳವರೆಗೆ ಜೈಲಿನಲ್ಲಿಡಲಾಗುತ್ತದೆ ಎಂದು ಎಚ್ಚರಿಸಿತ್ತು.