ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲೆಂದು ಬಂದ ವಿದ್ಯಾರ್ಥಿನಿ, ತಾಯಿ ಕಣ್ಣ ಮುಂದೆಯೇ ಪ್ರಿಯಕರನೊಂದಿಗೆ ಪರಾರಿ!
ತಂದೆ ತಾಯಿ ಪರೀಕ್ಷೆ ಬರೆಯಲೆಂದು ಕಾಲೇಜಿಗೆ ಕಳಿಸಿದರೆ ಇಲ್ಲೊಬ್ಬ ಅಪ್ರಾಪ್ತ ಯುವತಿ ಪೋಷಕರ ಕಣ್ಣ ಮುಂದೆಯೇ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಈ ಘಟನೆಯಿಂದ ತಾಯಿ ಆಘಾತಗೊಂಡಿದ್ದಾರೆ.
ಈ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಪಟ್ಟಣದಲ್ಲಿ ನಡೆದಿದೆ. ಕೊಳ್ಳೇಗಾಲ ತಾಲೂಕಿನ ಹೊಸ ಹಂಪಾಪುರ ಗ್ರಾಮದ ಸುಜಾತ ಎಂಬುವರ ಪುತ್ರಿ ಪ್ರಿಯಕರನ ಜತೆ ನಾಪತ್ತೆಯಾದ ಅಪ್ರಾಪ್ತ ಯುವತಿ.
ಈಕೆ ಎಸ್‌ವಿಕೆ ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದು, ಮೇ 6ರಂದು ಕೊಳ್ಳೇಗಾಲ ಪಟ್ಟಣದ ಮಾನಸ ಕಾಲೇಜಿನಲ್ಲಿ ನಿಗದಿಯಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಕ್ಕೆ ತನ್ನ ತಾಯಿಯೊಂದಿಗೆ ಬಂದಿದ್ದಳು. ಮಗಳನ್ನು ಕರೆತಂದ ತಾಯಿ, ಪರೀಕ್ಷೆ ಬರೆಯಲು ಒಳ ಕಳುಹಿಸಿ ಮಗಳಿಗಾಗಿ ಪರೀಕ್ಷೆ ಮುಗಿಯುವರೆಗೂ ಹೊರಗೆ ಕಾದು ಕುಳಿತ್ತಿದ್ದರು.
ಆದರೆ ಅಪ್ರಾಪ್ತ ಯುವತಿ ಪರೀಕ್ಷೆ ಮುಗಿಸಿ ಹೊರ ಬರುತ್ತಿದ್ದಂತೆ ಕಾಲೇಜು ಪಕ್ಕದಲ್ಲಿದ್ದ ಪೆಟ್ರೋಲ್ ಬಂಕ್ ಬಳಿಗೆ ಏಕಾಏಕಿ ಓಡಿಹೋಗಿದ್ದಾಳೆ. ಇದನ್ನು ನೋಡಿದ ತಾಯಿ ದಿಗಿಲುಗೊಂಡು, ಯಾಕವ್ವ ಓಡ್ತಿದ್ದೀಯಾ? ಬಾ ಎಂದು ಕೂಗುತ್ತಿದ್ದರೂ ಕಿವಿಗೊಡದೆ ಪೆಟ್ರೋಲ್ ಬಂಕ್ ಬಳಿ ನಿಂತಿದ್ದ ಕಾರೊಂದನ್ನು ಹತ್ತಿ ಪರಾರಿಯಾಗಿದ್ದಾಳೆ ಕಾರಿನ ಹಿಂದೆ ತಾಯಿಯೂ ಸ್ವಲ್ಪ ದೂರ ಓಡಿದರೂ ಕಾರು ನಿಲ್ಲಿಸದೇ ಹೋಗಿದೆ.
ಇತ್ತ ತಾಯಿ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮುಳ್ಳೂರು ಗ್ರಾಮದ ಯುವಕ ನಾಗರಾಜು ಎಂಬಾತ ನನ್ನ ಮಗಳನ್ನು ಕರೆದೊಯ್ದಿರುವ ಅನುಮಾನವಿದೆ ಎಂದು ಹೇಳಿದ್ದಾರೆ. ಇನ್ನು ಪ್ರಿಯಕರನ ಜೊತೆ ಪರಾರಿಯಾದ ವಿದ್ಯಾರ್ಥಿನಿಗೆ ಇನ್ನೂ 18 ವರ್ಷ ತುಂಬಿಲ್ಲ. ಇನ್ನೊಂದು ತಿಂಗಳು ಬಾಕಿ ಇದೆ ಎಂದು ತಾಯಿ ಹೇಳಿದ್ದಾರೆ.