ಮಲ್ಪೆ :ಫ್ಲೋಟಿಂಗ್ ಬ್ರಿಡ್ಜ್ ಉದ್ಘಾಟನೆಗೊಂಡ ಒಂದು ವಾರದೊಳಗೆ ಹಾನಿ!
ರಾಜ್ಯದ ಮೊದಲ ಹಾಗೂ ದೇಶದ ಎರಡನೇ ತೇಲುವ ಸೇತುವೆ ಉಡುಪಿಯ ಮಲ್ಪೆ ಬೀಚ್‌ನಲ್ಲಿ ನಿರ್ಮಾಣಗೊಂಡು ಶುಕ್ರವಾರ ಲೋಕಾರ್ಪಣೆಗೊಂಡಿತ್ತು. ಆದರೆ ಇದೀಗ ಒಂದು ವಾರದೊಳಗೆ ಕಡಲಿನ ಅಬ್ಬರಕ್ಕೆ ಆ ಸೇತುವೆ ಹಾನಿಗೊಂಡಿದೆ.
ಈ ತೇಲುವ ಸೇತುವೆಯಲ್ಲಿ ಅಲೆಗಳ ಮೇಲೆ ನಡೆಯುವ ಅಪೂರ್ವ ಅವಕಾಶ ಪ್ರವಾಸಿಗರಿಗೆ ಸಿಗುವ ನಿಟ್ಟಿನಲ್ಲಿ, ಸ್ಥಳೀಯರ ಸಹಕಾರದೊಂದಿಗೆ ಈ ಅಪರೂಪದ ಫ್ಲೋಟಿಂಗ್ ಬ್ರಿಡ್ಜ್ ನಿರ್ಮಾಣವಾಗಿತ್ತು. ಏಕಾಏಕಿ ಸಮುದ್ರದಲ್ಲಿ ಅಬ್ಬರ ಕಾಣಿಸಿಕೊಂಡ ಕಾರಣ ಸೇತುವೆಯನ್ನು ಕಳಚಲು ಸಾಧ್ಯವಾಗಲಿಲ್ಲ. ಹೀಗಾಗಿ ಸೇತುವೆಯ ಲಾಕ್ ತೆಗೆಯುವ ವೇಳೆ ಸೇತುವೆಯ ಭಾಗಗಳು ಕಳಚಿಕೊಂಡಿವೆ ಎನ್ನಲಾಗಿದೆ. ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಅಲೆಗಳಲ್ಲಿ ತೇಲುವ ಸೇತುವೆಯನ್ನು ನೋಡಲು ಮತ್ತು
ಅನುಭವಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರೂ
ಅವಕಾಶ ನೀಡಿರಲಿಲ್ಲ. ಅಲೆಗಳ ಅಬ್ಬರ ಹೆಚ್ಚಿದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ಪ್ರವಾಸಿಗರು ನೀರಿಗೆ ಇಳಿಯದಂತೆ ಸ್ವಯಂಸೇವಕರು ಕಟ್ಟೆಚ್ಚರ ವಹಿಸಿದ್ದರು. ಇಲ್ಲಿನ ಜೀವ ರಕ್ಷಕ ತಂಡ ಎಲ್ಲರ ಮೇಲೂ ನಿಗಾ ಇರಿಸಿ, ನೀರಿಗಿಳಿಯಲು ನಿಷೇಧ ಹೇರಿತ್ತು.
ಆದರೆ ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಮತ್ತೆ ಈ ಸೇತುವೆ ಕಾರ್ಯಾರಂಭ ಮಾಡಲಿದೆ ಎಂಬ ಶುಭ ಸುದ್ದಿಯನ್ನು ಪ್ರವಾಸಿಗರಿಗೆ ನೀಡಲಾಗಿದೆ. ‘ಸುರಕ್ಷತೆ ಮತ್ತು ಲೈಫ್ ಜಾಕೆಟ್ ಧರಿಸಿದ ಬಳಿಕವೇ ಸೇತುವೆಯಲ್ಲಿ ನಡೆಯಲು ಅವಕಾಶ ನೀಡಲಾಗುತ್ತದೆ’ ಎಂದು ಬೀಚ್ ಅಭಿವೃದ್ಧಿ ಸಮಿತಿಯ ನಿರ್ವಾಹಕ ಸುದೇಶ್ ಶೆಟ್ಟಿ ಹೇಳಿದ್ದಾರೆ.
ಈ ಸೇತುವೆಯು 100 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲವಿದ್ದು, ಹೆಚ್ಚಿನ ಸಾಂದ್ರತೆಯ ಫೋಂಟೋನ್ಸ್ ಬ್ಲಾಕ್ ಗಳಿಂದ ಇದನ್ನು ಮಾಡಲಾಗಿತ್ತು. ಇದರಲ್ಲಿ ಒಂದು ಬಾರಿಗೆ ನೂರು ಜನರು ಸಾಗಬಹುದಾಗಿದ್ದು, ಸೇತುವೆಯ ಕೊನೆಯಲ್ಲಿ ಸಮುದ್ರಕ್ಕೆ ಚಾಚಿರುವ 12 ಮೀಟರ್ ಉದ್ದ 7.5 ಮೀಟರ್ ಅಗಲದ ವೇದಿಕೆ ಇದೆ. ಇದರಲ್ಲಿ 15 ನಿಮಿಷ ಕಾಲ ಕಳೆಯಲು ಅವಕಾಶ ಕಲ್ಪಿಸಲಾಗಿದೆ. ಸುಮಾರು 80 ಲಕ್ಷ ರೂ. ವೆಚ್ಚದ ವಿದೇಶಿ ತಂತ್ರಜ್ಞಾನದಲ್ಲಿ ತಯಾರಿಸಿದ ಸೇತುವೆ ಇದಾಗಿದ್ದು, ಪ್ರವಾಸಿಗರ ಸುರಕ್ಷತೆಗಾಗಿ 10 ಜನ ಲೈಫ್ ಗಾರ್ಡ್, 30 ಮಂದಿ ಲೈಫ್ ಬಾಯ್ಸ್ ಮತ್ತು ಪ್ಯಾಟ್ರೋಲಿಂಗ್ ಮಾಡಲು ಒಂದು ಬೋಟು ನಿಯೋಜಿಸಲಾಗಿತ್ತು.