ಹುಬ್ಬಳ್ಳಿಯಲ್ಲಿ ದೊಡ್ಡ ದನಿಯಲ್ಲಿ ಮೊಳಗಿದ ಆಜಾನ್ ಗೆ ಪ್ರತಿಯಾಗಿ ಸುಪ್ರಭಾತದ ಮೊದಲ ಆವಾಜ್ !!
ಸರ್ಕಾರದ ವಿರೋಧದ ನಡುವೆಯೂ ಹಿಂದು ದೇವಾಲಯಗಳಲ್ಲಿ ಹನುಮಾನ್ ಚಾಲಿಸ್ ಹಾಗೂ ಭಕ್ತಿ ಗೀತೆಗಳ ಪಠಣವನ್ನ ಪ್ರಾರಂಭಿಸಲು ಹಿಂದುಪರ ಸಂಘಟನೆಗಳು ತಯಾರಿ ನಡೆಸಿದ್ದು, ಇದರ ನಡುವೆ ಮಸೀದಿಗಳಲ್ಲಿ ಆಜಾನ್ ಮೈಕ್ ಗಳನ್ನ ತೆಗೆಸುವಂತೆ ಗಡುವು ನೀಡಿದ್ದ ಸಮಯ ಮುಗಿದಿದ್ದು,ಇಂದಿನಿಂದ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಸಾವಿರ ದೇವಸ್ಥಾನಗಳಲ್ಲಿ ಹನುಮಾನ್ ಚಾಲಿಸ್ ಪಠಣ ಮಾಡುವುದಾಗಿ ತಿಳಿಸಿದ್ದರು.
ಹೌದು.. ರಾಜ್ಯದಲ್ಲಿ ಮತ್ತೆ ಧರ್ಮ ದಂಗಲ್ ಸದ್ದು ಮಾಡಲು ಶುರುವಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಮಸೀದಿಗಳಲ್ಲಿನ ಆಜಾನ್ ನಿಲ್ಲಬೇಕು. ಮಸೀದಿಗಳಲ್ಲಿ ಮೈಕ್‌ಗಳನ್ನ ತೆರವುಗೊಳಿಸಬೇಕು ಎಂದು ಶ್ರೀರಾಮಸೇನೆ ಮುಖಂಡ ಮುತಾಲಿಕ್ ಸರ್ಕಾರಕ್ಕೆ ಗಡುವು ನೀಡಿದ್ದರು. ಆದರೆ ಸರ್ಕಾರ ಇದುವರೆಗೂ ಮೈಕ್ ಗಳನ್ನ ತೆರವು ಮಾಡುವ ಕೆಲಸಕ್ಕೆ ಕೈ ಹಾಕಿಲ್ಲ.
ಹಾಗಾಗಿ ಇಂದು ಬೆಳಗ್ಗೆ 5 ಗಂಟೆಯಿಂದ ರಾಜ್ಯದ ಸಾವಿರಕ್ಕೂ ಹೆಚ್ಚು ದೇವಾಲಯಗಳಲ್ಲಿ ಸುಪ್ರಭಾತ ಮೊಳಗಿದೆ.
ದೇವಾಲಯಗಳಲ್ಲಿ ಹನುಮಾನ್ ಚಾಲಿಸ್ ಹಾಗೂ ಭಕ್ತಿ ಗೀತೆಗಳು ಮೊಳಗಲಿವೆ ಎಂದು ಮುತಾಲಿಕ್ ತಿಳಿಸಿದ್ದರು. ಈಗ ಹುಬ್ಬಳ್ಳಿ ವಿವಾದಿತ ದೇವಸ್ಥಾನದಲ್ಲಿಯೇ ಮೊದಲ ಸುಪ್ರಭಾತ ಮೊಳಗಿದೆ. ಕಳೆದ ತಿಂಗಳು ನಡೆದ ಕೋಮು ಗಲಭೆಯಲ್ಲಿ ಈ ದೇವಸ್ಥಾನದ ಮೇಲೆಯೇ ದಾಳಿ ನಡೆದಿತ್ತು, ಈಗ ಇದೇ ದೇವಸ್ಥಾನದಲ್ಲಿ ಸುಪ್ರಭಾತ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ.
ಹಳೇ ಹುಬ್ಬಳ್ಳಿಯ ದಿಡ್ಡಿ ಹನುಮಂತ ದೇವಸ್ಥಾನದಲ್ಲಿ ಸುಪ್ರಭಾತ ಅಭಿಯಾನಕ್ಕೆ ಶ್ರೀರಾಮಸೇನೆ ಚಾಲನೆ ನೀಡಿದ್ದು, ಹನುಮ ಜಪಿಸುವ ಮಂತ್ರ ಮತ್ತು ಭಕ್ತಿಗೀತೆಗಳ ಜೊತೆಗೆ ಭಜನೆ ಮತ್ತು ಘಂಟಾಘೋಷಣೆ ಮೊಳಗಿದೆ. ಜೊತೆಗೆ ಶ್ರೀರಾಮಸೇನೆ, ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಮತ್ತು ಅರ್ಚಕರಿಂದ ವಿಶೇಷ ಪೂಜೆ ಸಹ ನಡೆದಿದೆ.