“ಚಪ್ಪಲಿ ಕಳೆದು ಹೋಗಿದೆ ಸ್ವಾಮಿ, ಹುಡುಕಿಕೊಡಿ” ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟ ರೈತ
ಮಧ್ಯಪ್ರದೇಶ: ಹಣ ಕಳೆದು ಹೋಗಿದೆ, ಚಿನ್ನಾಭರಣ ಕಳುವಾಗಿದೆ, ಮನೆ ಮುಂದೆ ನಿಲ್ಲಿಸಿದ್ದ ವಾಹನಗಳು ಕಳುವಾಗಿದೆ ಅಂತ ಜನಸಾಮಾನ್ಯರು ದಿನನಿತ್ಯ ಪೊಲೀಸರಿಗೆ ದೂರು ಕೊಡುವುದನ್ನು ಕೇಳಿದ್ದೇವೆ. ಮೊನ್ನೆ ಒಬ್ಬಾತ ಅತಿರೇಕಕ್ಕೆ ಹೋಗಿ 2 ಕ್ವಾರ್ಟರ್ ಗಂಟಲಿಗೆ ಹುಯ್ದುಕೊಂಡರೂ ಕಿಕ್ಕೇ ಏರ್ತಿಲ್ಲ ಅಂತ ಗೃಹಸಚಿವರಿಗೇ ಪತ್ರ ಬರೆದಿದ್ದ. ಇವತ್ತು ಇಲ್ಲೊಬ್ಬ ರೈತನ ಚಪ್ಪಲ್ ಮಿಸ್ಸಿಂಗ್ ಕಂಪ್ಲೇಂಟ್ ಬಂದಿದೆ.
ಮಧ್ಯ ಪ್ರದೇಶದಲ್ಲಿ ಈ ವಿಚಿತ್ರ ಪ್ರಕರಣ ನಡೆದಿದೆ. ರೈತನೊಬ್ಬ ನನ್ನ ಚಪ್ಪಲಿ ಕಳುವಾಗಿದೆ ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಹರಿದು ಹೋದ ಅಂಗಿ ತೊಟ್ಟು ಕಾಲಿಗೆ ಚಪ್ಪಲಿ ಇಲ್ಲದೇ ಬಂದ ರೈತನೋರ್ವ ಮಧ್ಯಪ್ರದೇಶದ ಪೊಲೀಸ್ ಠಾಣೆಗೆ ಬಂದಿದ್ದ. ಈತನನ್ನು ಕಂಡ ಪೊಲೀಸರು, ಏನು ಸಮಸ್ಯೆ ಅಂತ ವಿಚಾರಿಸಿದಾಗ, ಆಗ ಆತ ಹೇಳಿದ ಮಾತು ಕೇಳಿ ಪೊಲೀಸರೇ ಒಂದು ಕ್ಷಣ ಆಶ್ಚರ್ಯಗೊಂಡಿದ್ದಾರೆ. ಆ ರೈತನ ಹೆಸರು ಜೀತೆಂದ್ರ ಎಂದು. ಈತ ಸ್ನೇಹಿತನೊಂದಿಗೆ ಬಂದು ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ನೀಡಿದ್ದಾನೆ.
ರೈತ ಜಿತೇಂದ್ರ, ತನ್ನ ಚಪ್ಪಲಿ ಕಳೆದು ಹೋಗಿದೆ, ಅದನ್ನು ಹುಡುಕಿಕೊಡಿ ಸ್ವಾಮಿ ಅಂತ ಪೊಲೀಸರ ಮುಂದೆ ಬೇಡಿಕೊಂಡಿದ್ದಾನೆ. 180 ರೂಪಾಯಿ ಕೊಟ್ಟು ನಾನು ಕಪ್ಪು ಬಣ್ಣದ ಚಪ್ಪಲಿ ಖರೀದಿ ಮಾಡಿದ್ದೆ. ಆದರೆ ಅದನ್ನು ಕಳ್ಳರು ಕದ್ದೊಯ್ದಿದ್ದಾರೆ. ದಯವಿಟ್ಟು ಅದನ್ನು ಹುಡುಕಿಕೊಟ್ಟು, ನನಗೆ ತಲುಪಿಸಿ ಅಂತ ಮನವಿ ಮಾಡಿದ್ದಾನೆ. ಮೊದಲಿಗೆ ಈತನ ಮಾತು ಕೇಳಿ ಪೊಲೀಸರು ನಕ್ಕಿದ್ದಾರೆ.
ಆದರೆ ರೈತ ಇದ್ಯಾವುದನ್ನೂ ಕ್ಯಾರೆ ಮಾಡದೇ, ತನ್ನ ಚಪ್ಪಲಿ ಕಳ್ಳತನದ ಹಿಂದೆ ಪಿತೂರಿ ಇದೆ ಅಂತ ಆರೋಪಿಸಿದ್ದಾನೆ. ಆತನ ಮಾತನ್ನು ಸಂಪೂರ್ಣವಾಗಿ ಆಲಿಸಿದ ನಂತರ ಕಂಪ್ಲೇಂಟ್ ಸ್ವೀಕರಿಸಿದ್ದಾರೆ ಪೊಲೀಸರು. ಇಷ್ಟು ಮಾತ್ರವಲ್ಲದೇ, ರೈತ ಜೀತೆಂದ್ರ ಕೆಲವು ಸಾಕ್ಷ್ಯಗಳನ್ನು ಕೂಡಾ ಪೊಲೀಸರಿಗೆ ನೀಡಿದ್ದಾನಂತೆ. ಸಾಕ್ಷ್ಯ ಪಡೆದುಕೊಂಡ ಪೊಲೀಸರು ದೂರು ಸ್ವೀಕರಿಸಿಕೊಂಡು ತನಿಖೆ ಶುರುಮಾಡಿದ್ದಾರೆ.