ಬೆಳ್ತಂಗಡಿ: ನೀರಿನ ವಿಚಾರಕ್ಕೆ ಅಕ್ಕ-ಪಕ್ಕದ ಮನೆಯವರ ನಡುವೆ ತಕರಾರು | ದೂರು ನೀಡಿದ ವ್ಯಕ್ತಿಯ ಕೈಗೆ ಕತ್ತಿಯಿಂದ ಕಡಿದ ಆರೋಪಿ !!
ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ತಕರಾರು ನಡೆದು, ಅದು ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಬೆಳೆದು ಆಕ್ರೋಶಿತ ವ್ಯಕ್ತಿ ಕತ್ತಿಯಿಂದ ಇನ್ನೊಬ್ಬ ವ್ಯಕ್ತಿಯ ಕೈಗೆ ಕಡಿದ ಘಟನೆ ಬೆಳ್ತಂಗಡಿ ತಾಲೂಕು ಕಡಿರುದ್ಯಾವರ ಗ್ರಾಮದ ಹೇಡ್ಯಾ ಎಂಬಲ್ಲಿ ನಡೆದಿದೆ.
ಗಾಯಗೊಂಡವರನ್ನು ಹೇಡ್ಯ ನಿವಾಸಿ ಲೂಯಿಸ್ ಗುರುತಿಸಲಾಗಿದ್ದು, ವಾಸು ಗೌಡ ಹಲ್ಲೆ ನಡೆಸಿದ ಆರೋಪಿ.
ಲೂಯಿಸ್ ಹಾಗೂ ವಾಸು ಗೌಡ ಎಂಬುವರರಿಗೆ ಕುಡಿಯುವ ನೀರಿನ ಗುಂಡಿಯ ವಿಚಾರದಲ್ಲಿ ತಕರಾರಿತ್ತು. ದಿನಾಂಕ 04.05.2022 ರಂದು ವಾಸು ಗೌಡರವರು ಲೂಯಿಸ್ ಮನೆಗೆ ಬರುವ ಕುಡಿಯುವ ನೀರಿನ ಪೈಪ್ ನ್ನು ತುಂಡು ಮಾಡಿದ್ದು, ಈ ಬಗ್ಗೆ ಬೆಳ್ತಂಗಡಿ ಠಾಣೆಗೆ ಲೂಯಿಸ್ ದೂರು ನೀಡಿದ್ದರು.
ನಿನ್ನೆ ಸಂಜೆ 08.05.2022 ರಂದು ಸಂಜೆ 4.00 ಗಂಟೆ ಸುಮಾರಿಗೆ ಲೂಯಿಸ್ ಮಲ್ಲಡ್ಕ ಎಂಬಲ್ಲಿ ರಸ್ತೆ ಬದಿಯಲ್ಲಿ ನಿಂತುಕೊಂಡಿರುವಾಗ ಆರೋಪಿ ವಾಸು ಗೌಡರವರು ಅವರ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. “ನೀನು ಬಾರಿ ಕಂಪ್ಲೇಂಟ್ ಕೊಡುತ್ತೀಯಾ, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಹೇಳುತ್ತಾ ಕೊಕ್ಕೆ ಕತ್ತಿಯಿಂದ ಲೂಯಿಸ್ ಅವರ ಎಡ ಕೈ ರಟ್ಟೆ ಹಾಗೂ ಎಡ ಕೈ ಬೆರಳಿಗೆ ಕಡಿದಾಗ ಲೂಯಿಸ್ ತಪ್ಪಿಸಲು ಬಲ ಕೈ ಅಡ್ಡ ಹಿಡಿದಾಗ ಕತ್ತಿಯು ಬಲ ಕೈ ಅಂಗೈಗೆ ತಾಗಿದೆ. ಇದರಿಂದ ಲೂಯಿಸ್ ಗಾಯಗೊಂಡಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ವಾಸು ಗೌಡ, ಈ ಬಾರಿ ನೀನು ಬಚಾವ್ ಆಗಿದ್ದಿ. ಮುಂದಕ್ಕೆ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.