ಪದ್ಮಶ್ರೀ ಪುರಸ್ಕೃತ ಸುಕ್ರಜ್ಜಿ ಮಂಗಳೂರಿನ ಆಸ್ಪತ್ರೆಗೆ ದಾಖಲು
ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಅವರು ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಕ್ರಿ ಬೊಮ್ಮಗೌಡ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
86 ವರ್ಷ ಪ್ರಾಯದ ಸುಕ್ರಿ ಬೊಮ್ಮಗೌಡ ಅವರು ಕಳೆದ 4 ತಿಂಗಳಿನಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ನಾಲ್ಕು ದಿನಗಳಿಂದ ಈಚೆಗೆ ತಲೆಸುತ್ತು ಬರುತ್ತಿದ್ದುದರಿಂದ ವೈದ್ಯರ ಸಲಹೆಯ ಮೇರೆಗೆ ಶನಿವಾರ ಮಧ್ಯಾಹ್ನ 12.30 ಗಂಟೆಗೆ ಹುಟ್ಟೂರು ಅಂಕೋಲಾದಿಂದ ಕರೆತಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದೀಗ ಸುಕ್ರಿ ಬೊಮ್ಮಗೌಡ ಅವರಿಗೆ ಉಸಿರಾಟಕ್ಕೆ ತಾತ್ಕಾಲಿಕ ಕೃತಕ ವ್ಯವಸ್ಥೆ ಕಲ್ಪಿಸಿದ್ದು ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಪರೀಕ್ಷೆಯ ವೇಳೆ ಸುಕ್ರಿ ಬೊಮ್ಮಗೌಡ ಅವರಿಗೆ ಅಲ್ಪ ಪ್ರಮಾಣದ ಹೃದಯ ಸಮಸ್ಯೆ ಇರುವುದು ಕಂಡು ಬಂದಿದ್ದು, ವೈದ್ಯರ ಸಲಹೆಯ ಮೇರೆಗೆ ಮುಂದಿನ ಚಿಕಿತ್ಸೆ ನಡೆಯಲಿದೆ.
ಅಂಕೋಲಾದ ಹಾಲಕ್ಕಿ ಒಕ್ಕಲಿಗ ಜನಾಂಗಕ್ಕೆ ಸೇರಿದ ಸುಕ್ರಿ ಬೊಮ್ಮಗೌಡ ಅವರು ಸುಪ್ರಸಿದ್ಧ ಜಾನಪದ ಗಾಯಕಿ. ಹಾಲಕ್ಕಿ ಬುಡಕಟ್ಟು ಸಮುದಾಯದ ಹೋರಾಟಗಾರ್ತಿ, ಪದ್ಮಶ್ರೀ ಪುರಸ್ಕೃತ ಸುಕ್ರಿಜ್ಜಿ ಎಲ್ಲರ ಹೆಮ್ಮೆ.ಮದ್ಯ ವ್ಯಸನದಿಂದ ಗಂಡನ ಸಾವಿಗೀಡಾದ ಬಳಿಕ ಸುಕ್ರಜ್ಜಿ 1990 ರ ದಶಕದಲ್ಲಿ ಮದ್ಯ ವಿರೋಧಿ ಆಂದೋಲನವನ್ನು ನಡೆಸಿದ್ದರು.