ಮಹಿಳೆಯನ್ನು ಎಳೆದೊಯ್ದು ಕಾರಿನಲ್ಲಿ ಕೂರಿಸಿ, ಹಲ್ಲೆ ಮಾಡಿ,ನಡುರಸ್ತೆಯಲ್ಲಿ ದೂಡಿದ ದುಷ್ಕರ್ಮಿಗಳು| ಡೇಂಜರಸ್ ವೀಡಿಯೋ ವೈರಲ್
‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ’ ಅಂತ ಸಂಸ್ಕ್ರತದಲ್ಲಿ ಒಂದು ಮಾತಿದೆ. ಇದರರ್ಥ ಎಲ್ಲಿ ಹೆಣ್ಣುಮಕ್ಕಳನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆ ಎಂದು. ಆದರೆ ಇತ್ತೀಚಿನ ಸಮಯದಲ್ಲಿ ಹಾಗೇ ನಡೆಯುವುದಿಲ್ಲ. ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ನ್ಯಾಯಯುತವಾಗಿ ಮಾತನಾಡಲು ಬಂದವರ ಮೇಲೂ ಬರ್ಬರವಾಗಿ ಹಲ್ಲೆ ಮಾಡುವುದು ಪರಿಪಾಟಿದೆ. ಇದಕ್ಕೆ ಉದಾಹರಣೆಯಾಗಿ ಒಂದು ಘಟನೆ ನಡೆದಿದೆ.
ಮಹಿಳೆಯೋರ್ವಳು ಖಾಸಗಿ ಕ್ಯಾಬ್ ನಲ್ಲಿ ಚಲಿಸುತ್ತಿದ್ದಾಗ, ಇನ್ನೊಂದು ಗಾಡಿ ಕ್ಯಾಬ್ ಗೆ ಅಡ್ಡ ಬಂದು ದಾರಿ ನೀಡದೇ ಹೋದಾಗ, ಜಗಳ ಪ್ರಾರಂಭವಾಗಿ, ಈ ಜಗಳದ ಮಧ್ಯೆ ಕ್ಯಾಬ್ ನಲ್ಲಿದ್ದ ಯುವತಿ ಅಡ್ಡ ಬಂದಿದ್ದು, ನನ್ನ ಕ್ಯಾಬ್ ಚಾಲಕನಿಗೆ ಏನೂ ಮಾತಾಡಬೇಡಿ ಎಂದಾಗ ಅವಳಿಗೆ ಹಲ್ಲೆ ಮಾಡಿ ನಂತರ, ಆಕೆಯನ್ನು ಬಲವಂತವಾಗಿ ಅವರ ಕಾರಲ್ಲಿ ಕರೆದುಕೊಂಡು ಹೋಗಿ, ಹಲ್ಲೆ ಮಾಡಿ, ಚಲಿಸುತ್ತಿರುವ ಗಾಡಿಯಿಂದ ಆಕೆಯನ್ನು ನಡು ರಸ್ತೆಯಲ್ಲಿ ದೂಡಿಹಾಕಿರುವ ಘಟನೆಯೊಂದು ನಡೆದಿದೆ. ಈ ಘಟನೆ ನಡೆದಿರುವುದು ರಾಷ್ಟ್ರ ರಾಜಧಾನಿ ದೆಹಲಿಯ ಅಮರ್ ಕಾಲೋನಿಯಲ್ಲಿ.
ಇಬ್ಬರು ವ್ಯಕ್ತಿಗಳು ಮಹಿಳೆಯ ಮೇಲೆ ಹಲ್ಲೆ ನಡೆಸಿ, ಚಲಿಸುತ್ತಿರುವ ಕಾರಿನಲ್ಲಿ ಆಕೆಯನ್ನು ಎಳೆದುಕೊಂಡು ಹೋದ ಪರಿಣಾಮ ಆಕೆ ರಸ್ತೆ ಮೇಲೆ ಬಿದ್ದು ಗಾಯಗೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಖಾಸಗಿ ಕ್ಯಾಬ್‌ನಲ್ಲಿ ಕುಳಿತಿದ್ದ ಮಹಿಳೆ ರಸ್ತೆಯಲ್ಲಿ ಇಬ್ಬರು ಚಾಲಕರ ನಡುವೆ ಜಗಳ ನಡೆಯುತ್ತಿದ್ದಾಗ ಮಧ್ಯ ಪ್ರವೇಶಿಸಿದ್ದಾರೆ. ಈ ವೇಳೆ ಆಕೆಗೆ ಥಳಿಸಿ, ಕಾರಿಂದ ಡಿಕ್ಕಿ ಹೊಡೆದು, ರಸ್ತೆಯಲ್ಲಿ ಎಳೆದೊಯ್ಯಲಾಗಿದೆ.
ಆ ಕಾರಿನಲ್ಲಿದ್ದ ಇಬ್ಬರು ಯುವಕರು ಆಕೆಗೆ ಕಪಾಳಮೋಕ್ಷ ಮಾಡಿ ಎಳೆದೊಯ್ದಿದ್ದಾರೆ ಎನ್ನಲಾಗಿದೆ. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಸ್ಥಳದ ಬಳಿ ಹಲವಾರು ಜನರು ಜಮಾಯಿಸಿದಾಗ ಚಲಿಸುತ್ತಿದ್ದ ಕಾರಿನಿಂದ ಮಹಿಳೆಯನ್ನು ತಳ್ಳಿ ಎಳೆದಾಡಿದ ವೀಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ರಸ್ತೆ ಮೇಲೆ ಬಿದ್ದಿದ್ದರಿಂದ ಮಹಿಳೆಯ ಮೊಣಕೈಗೆ ಗಾಯವಾಗಿದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.
ಸದ್ಯಕ್ಕೆ ಕಾರಿನ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಪೊಲೀಸರು ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಲ್ಲಿ ಒಬ್ಬನನ್ನು ಫರಿದಾಬಾದ್ ನಿವಾಸಿ ಉದಯವೀರ್ ಸಿಂಗ್ (25) ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಯುವಕ ತಲೆಮರೆಸಿಕೊಂಡಿದ್ದಾನೆ.
ಏಪ್ರಿಲ್ 29ರಿಂದ 30ರ ಮಧ್ಯರಾತ್ರಿ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. “ನನ್ನ ಕ್ಯಾಬ್‌ನ ಚಾಲಕನನ್ನು ನಿಂದಿಸಬೇಡಿ ಎಂದು ನಾನು ಅವನಿಗೆ ಹೇಳಿದಾಗ ಈ ವಿಷಯಕ್ಕೆ ನಾನು ತಲೆಹಾಕಬಾರದು ಎಂದು ಹೇಳಿ ಹಲ್ಲೆ ಮಾಡಿದ್ದಾರೆ” ಎಂ ಯುವತಿ ದೂರಿನಲ್ಲಿ ಹೇಳಿದ್ದಾರೆ. ನಂತರ ಆತ ನನಗೆ ಕಪಾಳಮೋಕ್ಷ ಮಾಡಿ, ನನ್ನ ಬೆನ್ನಿಗೆ ಹಲವು ಬಾರಿ ಚಪ್ಪಲಿಯಿಂದ ಹೊಡೆದು ಆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾರೆ.