ವಿಮಾನದ ತುರ್ತು ಬಾಗಿಲು ತೆರೆದು ರೆಕ್ಕೆಯ ಮೇಲೆ ಹಾಯಾಗಿ ವಾಕಿಂಗ್ !! | ವ್ಯಕ್ತಿ ಪೋಲಿಸ್ ವಶ
ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ತೆರೆದು ವಿಮಾನದ ರೆಕ್ಕೆ ಮೇಲೆ ನಡೆದ 57 ವರ್ಷದ ಯುನೈಟೆಡ್ ಏರ್‌ಲೈನ್ಸ್ ಪ್ರಯಾಣಿಕನನ್ನು ಬಂಧಿಸಿದ ಘಟನೆ ಚಿಕಾಗೋದ ಓ’ಹೇರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ತುರ್ತು ನಿರ್ಗಮನ ದ್ವಾರ ತೆರೆದ ಕ್ಯಾಲಿಫೋರ್ನಿಯಾ ವ್ಯಕ್ತಿಯನ್ನು ಗುರುವಾರ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಚಿಕಾಗೋ ಪೊಲೀಸ್ ಇಲಾಖೆ(CPD)ಯ ಪ್ರಕಟಣೆಯ ಪ್ರಕಾರ, ಗೇಟ್ ಸಮೀಪ ನಿಂತಿದ್ದ ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ತೆರೆದು ವಿಮಾನದ ರೆಕ್ಕೆಗೆ ನಡೆಯುತ್ತಿದ್ದ ವ್ಯಕ್ತಿಯನ್ನು ಗ್ರೌಂಡ್ ಸಿಬ್ಬಂದಿ ಕೆಳಗೆ ಇಳಿಸಿದ್ದಾರೆ ಎಂದು ಚಿಕಾಗೋ ಪೊಲೀಸರು ಸೇರಿಸಿದ್ದಾರೆ.
ಸ್ಯಾನ್ ಡಿಯಾಗೋದಿಂದ ಬರುತ್ತಿದ್ದ ಯುನೈಟೆಡ್ ಏರ್‌ಲೈನ್ಸ್ ಫ್ಲೈಟ್ 2478 ನಲ್ಲಿ ಈ ಘಟನೆ ಸಂಭವಿಸಿದ್ದು, ಅಜಾಗರೂಕ ನಡವಳಿಕೆ ಆರೋಪದ ಮೇಲೆ ರಾಂಡಿ ಫ್ರಾಂಕ್ ಡೇವಿಲಾ ಅವರ ವಿರುದ್ಧ ಕೇಸ್ ದಾಖಲಿಸಿ, ಬಂಧಿಸಲಾಗಿದೆ. ಗ್ರೌಂಡ್ ಸಿಬ್ಬಂದಿ ತುರ್ತು ನಿರ್ಗಮನ ಬಾಗಿಲು ತೆರೆದ ವ್ಯಕ್ತಿಯನ್ನು ವಿಮಾನದಿಂದ ಕೆಳಗೆ ಇಳಿಸಿದ್ದಾರೆ. ನಂತರ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಕೆಳಗಿಳಿದರು ಎಂದು ತಿಳಿದುಬಂದಿದೆ.