ಆಸ್ಪತ್ರೆ ಸಿಬ್ಬಂದಿಗಳ ತೀವ್ರ ನಿರ್ಲಕ್ಷ್ಯ , 3 ದಿನದ ನವಜಾತ ಶಿಶುವಿನ ಕೈಕಾಲುಗಳನ್ನು ಕಚ್ಚಿದ ಇಲಿಗಳು

ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಆಗ ತಾನೇ ಜನಿಸಿದ ಮಗುವಿನ ಕೈಕಾಲುಗಳನ್ನು ಇಲಿ ಕಚ್ಚಿ ಹಾಕಿದ ಘಟನೆಯೊಂದು ನಡೆದಿದ್ದು, ಸಿಬ್ಬಂದಿಗಳ ತೀವ್ರ ನಿರ್ಲಕ್ಷ್ಯ ಸಾಬೀತಾಗಿದೆ. ಈ ಘಟನೆ ಜಾರ್ಖಂಡ್ ನ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಈ ಘಟನೆ ಮೇ 2 ರಂದು ಗಿರಿದಿಹ್ ಸದರ್ ಆಸ್ಪತ್ರೆಯಲ್ಲಿ ನಡೆದಿದ್ದು, ಗಂಭೀರ ಸ್ಥಿತಿಯಲ್ಲಿದ್ದ ನವಜಾತ ಹೆಣ್ಣು ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದುಕೊಂಡಯ್ಯಲಾಗಿದೆ ಎನ್ನಲಾಗಿದೆ. ಮಗುವಿನ ಸ್ಥಿತಿ ಈಗ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಗುವಿನ ಕಾಲಿನಲ್ಲಿ ಆಳವಾದ ಗಾಯಗಳನ್ನು ನೋಡಿರುವುದಾಗಿ ತಾಯಿ ಮಮತಾ ದೇವಿ ಆರೋಪಿಸಿದ್ದಾರೆ. ಏಪ್ರಿಲ್ 29 ರಂದು ಮಗು ಜನಿಸಿದ್ದು, ಜನನದ ನಂತರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕಾರಣ ಎಂಸಿಎಚ್ ಗೆ ದಾಖಲಿಸಲಾಯಿತು.

ಶಿಶುವಿಗೆ ಕಾಮಾಲೆ ಸೋಂಕು ತಗುಲಿದೆ ಎಂದು ಕರ್ತವ್ಯದಲ್ಲಿದ್ದ ನರ್ಸ್ ತಾಯಿಗೆ ತಿಳಿಸಿದ್ದಾಳೆ. ನಂತರ ಶಿಶುವನ್ನು ಉತ್ತಮ ಆಸ್ಪತ್ರೆಗೆ ದಾಖಲಿಸುವಂತೆ ನರ್ಸ್ ಮನೆಮಂದಿಗೆ ಸಲಹೆ ನೀಡಿದ್ದರು ಎನ್ನಲಾಗಿದೆ.

ಈ ಘಟನೆಯ ಬಗ್ಗೆ ಜಿಲ್ಲಾಡಳಿತವು ತನಿಖೆಗೆ ಆದೇಶಿಸಿದೆ ಮತ್ತು ಕರ್ತವ್ಯದಲ್ಲಿರುವ ವೈದ್ಯರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ. ಹಾಗೂ ಇಬ್ಬರು ನೌಕರರನ್ನು ವಜಾ ಮಾಡಲಾಗಿದೆ ಎಂದು ತಿಳಿದು ಬಂದಿದೆ

Leave A Reply

Your email address will not be published.