ವಾರೆವ್ಹಾ..! ನೂರಕ್ಕೆ 555 ಅಂಕ ಪಡೆದ ವಿದ್ಯಾರ್ಥಿ- ಇದು ಹೇಗೆ ಸಾಧ್ಯ?
ಎಷ್ಟೋ ಮಂದಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುತ್ತಾರೆ. ಕೆಲವರು ಸಾಧಾರಣ. ಕೆಲವು ಮಂದಿ 100 ಕ್ಕೆ 100 ಮಾರ್ಕ್ ತಗೊಂಡವರೂ ಇದ್ದಾರೆ.
ಆದರೆ, 100ಕ್ಕೆ 555 ಅಂಕಗಳನ್ನು ಗಳಿಸಿದ್ದು ಎಂದಾದ್ರೂ ಕೇಳಿದ್ದೀರಾ..? ಬಿಹಾರದ ಮುಂಗರ್ ವಿಶ್ವವಿದ್ಯಾನಿಲಯವು ಈ ಎಡವಟ್ಟು ಮಾಡಿದೆ.
ಹೌದು, ಮುಂಗೇರ್ ವಿಶ್ವವಿದ್ಯಾನಿಲಯವು ಶನಿವಾರ ಗ್ರಾಜುಯೇಟ್ ಆರ್ಟ್ಸ್ ವಿಭಾಗದ ಭಾಗ-3 ಫಲಿತಾಂಶವನ್ನು ಪ್ರಕಟಿಸಿದೆ. ವಿದ್ಯಾರ್ಥಿಯೊಬ್ಬ 100ಕ್ಕೆ 555 ಅಂಕಗಳನ್ನು ಪಡೆದಿದ್ದು, ತಪ್ಪು ಅರಿತು ಪರೀಕ್ಷಾ ವಿಭಾಗವು ತಪ್ಪನ್ನು ಒಪ್ಪಿಕೊಂಡಿದೆ. ಸಮಯಕ್ಕೆ ಸರಿಯಾಗಿ ಫಲಿತಾಂಶ ಪ್ರಕಟಿಸುವ ಒತ್ತಡದಿಂದ ಈ ಅಜಾಗರೂಕತೆ ಸಂಭವಿಸಿದೆ ಎಂದು ಸ್ಪಷ್ಟನೆ ನೀಡಲಾಗಿದೆ.
ಕೆಕೆಎಂ ಕಾಲೇಜಿನ ವಿದ್ಯಾರ್ಥಿ ದಿಲೀಪ್ ಕುಮಾರ್ ಷಾಗೆ 100 ಅಂಕಗಳಿಗೆ ಒಟ್ಟು 555 ಅಂಕಗಳನ್ನು ನೀಡಿದ್ದು, ಆತನ ಒಟ್ಟಾರೆ ಅಂಕ ಶೇ. 108.5 ಆಗಿದೆ. ಮತ್ತೊಂದೆಡೆ ಬಾರ್ಹಿಯಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಸಂಧ್ಯಾ ಕುಮಾರಿ ಎಲ್ಲಾ ವಿಷಯಗಳಲ್ಲಿ ತೇರ್ಗಡೆಯಾಗಿದ್ದರೂ ಅಂತಿಮ ಫಲಿತಾಂಶದಲ್ಲಿ ಅನುತ್ತೀರ್ಣರಾಗಿದ್ದಾರೆ.
ಇನ್ನು ಮುಂಗೇರ್ ವಿಶ್ವವಿದ್ಯಾನಿಲಯದ ಪರೀಕ್ಷಾ ನಿಯಂತ್ರಕ ಡಾ. ರಾಮಶಿಶ್ ಪುರ್ವೆ ಅವರು ತಪ್ಪನ್ನು ಒಪ್ಪಿಕೊಂಡಿದ್ದು, ಮತ್ತೆಂದೂ ಈ ರೀತಿ ಆಗದಂತೆ ಎಚ್ಚರ ವಹಿಸುವುದಾಗಿ ತಿಳಿಸಿದ್ದಾರೆ. ಎಲ್ಲಾ ಪತ್ರಿಕೆಗಳನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದು. ತನಿಖೆ ಪೂರ್ಣಗೊಂಡ ನಂತರವೇ ಪರಿಷ್ಕೃತ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.
ತಮ್ಮ ಫಲಿತಾಂಶಗಳಲ್ಲಿ ಮರುಪರಿಶೀಲನೆಯನ್ನು ಬಯಸುವ ಎಲ್ಲಾ ವಿದ್ಯಾರ್ಥಿಗಳು ಮೇ 10 ರೊಳಗೆ ಅರ್ಜಿಯನ್ನು ಸಲ್ಲಿಸಬೇಕು ಎಂದು ಹೇಳಿದ್ದಾರೆ.