ತಂದೆಯ ಜೀವ ಉಳಿಸಲು ಯಕೃತ್ತು ದಾನಕ್ಕೆ ಮುಂದಾದ ಅಪ್ರಾಪ್ತ ಬಾಲಕಿ !!

ಮಗಳಿಗೆ ತಾಯಿಗಿಂತ ತಂದೆಯ ಮೇಲೆ ಪ್ರೀತಿ ಹೆಚ್ಚು. ತಂದೆ-ತಾಯಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಮಕ್ಕಳು ಹೇಗೆ ತಾನೇ ಸುಮ್ಮನೆ ನೋಡಿಕೊಂಡು ಕೂರಲು ಸಾಧ್ಯ. ಅಂತೆಯೇ ಇನ್ನೊಬ್ಬಳು ಬಾಲಕಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ತಂದೆಗೆ ನೆರವಾಗಲು ತನ್ನ ದೇಹದ ಅಂಗವನ್ನೇ ಹೆಚ್ಚಿಸಲು ಮುಂದಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.

 

ಯಕೃತ್ತಿನ ಸಮಸ್ಯೆಯಿಂದ ಹಾಸಿಗೆ ಹಿಡಿದಿರುವ ತನ್ನ ತಂದೆಗೆ ನೆರವಾಗಲು ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಪಿತ್ತಜನಕಾಂಗದ ನಿರ್ದಿಷ್ಟ ಭಾಗವನ್ನು ತಂದೆಗೆ ದಾನ ಮಾಡಿ ಅವರಿಗೆ ಲಿವರ್ ಕಸಿ ನಡೆಸಲು ಅನುಮತಿ ನೀಡುವಂತೆ ಕೋರಿ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಈ ಮನವಿಯನ್ನು ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿದೆ.

ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಹಾಗೂ ಮಾಧವ್ ಜಾಮ್ದಾರ್ ಅವರಿದ್ದ ವಿಭಾಗೀಯ ಪೀಠವು, ಅಪ್ರಾಪ್ತ ಬಾಲಕಿಯು ತನ್ನ ಯಕೃತ್ತಿನ ನಿರ್ದಿಷ್ಟ ಭಾಗವನ್ನು ಹಾಸಿಗೆ ಹಿಡಿದಿರುವ ತನ್ನ ತಂದೆಗೆ ದಾನ ಮಾಡಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡುವಂತೆ ಕೋರಿ 16 ವರ್ಷದ ಬಾಲಕಿಯ ಪರವಾಗಿ ಆಕೆಯ ತಾಯಿಯು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದೆ.

ಅರ್ಜಿಯಲ್ಲಿ ನೀಡಲಾಗಿರುವ ಮಾಹಿತಿಯ ಪ್ರಕಾರ, ಬಾಲಕಿಯ ತಂದೆಯು ಲಿವರ್​​ ಸಿರೋಸಿಸ್​ ಡಿಕಂಪೆನ್ಸೇಟೆಡ್​ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇವರಿಗೆ ಶೀಘ್ರದಲ್ಲಿಯೇ ಚಿಕಿತ್ಸೆ ಮಾಡದಿದ್ದರೆ 15 ದಿನಗಳ ಒಳಗಾಗಿ ತಂದೆಯು ಸಾವನ್ನಪ್ಪುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬಾಲಕಿಯ ತಾಯಿಯು ತನ್ನ ಪತಿಗೆ ಲಿವರ್​ ದಾನ ಮಾಡಲು ಎಲ್ಲಾ ಹತ್ತಿರದ ಸಂಬಂಧಿಗಳನ್ನು ಸಂಪರ್ಕಿಸಿದ್ದಾರೆ. ಆದರೆ ಅರ್ಜಿದಾರ ಮಹಿಳೆಯ ಮಗಳನ್ನು ಹೊರತುಪಡಿಸಿ ಮತ್ಯಾರೂ ಯಕೃತ್ತು ದಾನವನ್ನು ಮಾಡಲು ವೈದ್ಯಕೀಯವಾಗಿ ಸಧೃಡರಿಲ್ಲ ಎಂದು ವೈದ್ಯಕೀಯ ವರದಿಯು ಹೇಳಿದೆ.

ಅರ್ಜಿದಾರರ ಪರ ವಕೀಲ ತಪನ್​ ಥಟ್ಟೆ, ಹಾಸಿಗೆ ಹಿಡಿದಿರುವ ವ್ಯಕ್ತಿಯ ಹತ್ತಿರದ ಸಂಬಂಧಿಗಳು ಕಾನೂನಿನ ಅನುಮತಿಯನ್ನು ಪಡೆಯದೇ ತಮ್ಮ ಅಂಗಾಂಗ ದಾನವನ್ನು ಮಾಡಲು ಯಾವುದೇ ಅಭ್ಯಂತರ ಇರುವುದಿಲ್ಲ. ಆದರೆ ಇಲ್ಲಿ ಅರ್ಜಿದಾರರು ಅಪ್ರಾಪ್ತ ವಯಸ್ಸಿನವರಾಗಿರುವ ಹಿನ್ನೆಲೆಯಲ್ಲಿ ಮಾನವ ಅಂಗಾಂಗ ಕಸಿ ಕಾಯಿದೆಯ ಅಡಿಯಲ್ಲಿ ರಾಜ್ಯ ಸರ್ಕಾರದ ಸೂಕ್ತ ಪ್ರಾಧಿಕಾರದ ಅನುಮತಿಯನ್ನು ಪಡೆಯದೇ ತನ್ನ ಅಂಗಾಂಗವನ್ನು ದಾನ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಮಗೆ ಶೀಘ್ರದಲ್ಲಿಯೇ ಯಕೃತ್ತು ದಾನಕ್ಕೆ ಅನುಮತಿ ನೀಡಬೇಕೆಂದು ಕೋರಿದ್ದಾರೆ.

Leave A Reply

Your email address will not be published.