ಆ ಕೋಳಿ ತನ್ನ ತಲೆ ಕಡಿದ ನಂತರ ಕೂಡಾ 18 ತಿಂಗಳುಗಳ ಕಾಲ ಬದುಕಿತ್ತು | ತಲೆ ನೆಲಕ್ಕೆ ಬಿದ್ದರೂ ಸಾಯಲು ನಿರಾಕರಿಸಿದ ಕೋಳಿಯ ಕಥೆ !!

ಅದೊಂದು ಕುಟುಂಬ ಕೋಳಿ ಸಾಕಿ, ಅದನ್ನು ಮಾರಾಟ ಮಾಡಿ ಬದುಕುತ್ತಿತ್ತು. ಒಂದು ದಿನ ಅವರು ಸುಮಾರು 50 ಕೋಳಿಗಳನ್ನು ಮಾಂಸಕ್ಕಾಗಿ ವಧೆ ಮಾಡಲು ನಿರ್ಧರಿಸಿದ್ದರು. ಆ ಮಾಂಸ ಮಾಡಲು ಉದ್ದೇಶಿಸಿದ 50 ಕೋಳಿಗಳಲ್ಲಿ ಒಂದು ಕೋಳಿ ಮಾತ್ರ ಸಾಯಲು ನಿರಾಕರಿಸಿತ್ತು. ತನ್ನ ತಲೆ ಕಡಿದ ನಂತರ ಕೂಡಾ ಆ ಕೋಳಿ ಬದುಕಲು ಬಯಸಿತ್ತು !!

ಅಂದು, ಒಂದೊಂದಾಗಿ ಕೋಳಿಗಳ ತಲೆ ಕಡಿದ ಹಾಗೆ, ಎಲ್ಲಾ ಕೋಳಿಗಳು ಕೂಡಾ ಪಟಪಟನೆ ರೆಕ್ಕೆ, ಕಾಲು ಬಡಿದುಕೊಂಡು ನಿಮಿಷಗಳಲ್ಲಿ ಸತ್ತು ಬಿದ್ದಿದ್ದವು. ಆದರೆ, ಆಶ್ಚರ್ಯ ಎಂಬಂತೆ ಒಂದು ಕೋಳಿ ಮಾತ್ರ, ತನ್ನ ಕತ್ತು ನೆಲಕ್ಕೆ ಬಿದ್ದು ಬಿಟ್ಟಿದ್ದರೂ ಕೂಡಾ ಧಭ ಧಭಾ ದೌಡಾಯಿಸಿ ಓಡಿತ್ತು. ಅಲ್ಲಿಂದ ಓಡಿ ಅದು ಒಂದು ಮೂಲೆಯಲ್ಲಿ ಅಡಗಿ ಕೂತಿತ್ತು.

ಇದರಿಂದ ಬೆಕ್ಕಸ ಬೆರಗಾದ ಕುಟುಂಬ, ಅದನ್ನು ತಮ್ಮ ಫಾರ್ಮ್‌ ಹೌಸ್ ನಲ್ಲಿದ್ದ ಹಳೆಯ ಸೇಬಿನ ಪೆಟ್ಟಿಗೆಯಲ್ಲಿ ಇರಿಸಿದರು. ಮತ್ತು ಮರುದಿನ ಬೆಳಿಗ್ಗೆ ಎಚ್ಚರವಾದಾಗ, ಏನಾಯಿತು ಎಂದು ನೋಡಲು ಅವರು ಪೆಟ್ಟಿಗೆಯತ್ತ ಇಣುಕಿದರೆ, ಅವರಿಗೆ ಮತ್ತೊಂದು ಆಶ್ಚರ್ಯ ಕಾದಿತ್ತು : ಆ ಕೋಳಿ ಇನ್ನೂ ಜೀವಂತವಾಗಿತ್ತು ಮತ್ತು ಅದು ನಡೆದಾಡುತ್ತಿತ್ತು!

ಆ ಕೋಳಿಗೆ ಅವರು ಮೈಕ್ ಅಂತ ಹೆಸರಿಟ್ಟಿದ್ದರು. ತಲೆ ಇಲ್ಲದ ಕಾರಣ, ಕೋಳಿಗೆ ಆಹಾರ ಸೇವಿಸುವುದು ಅಸಾಧ್ಯವಿತ್ತು. ಅದಕ್ಕಾಗಿ, ಸಣ್ಣ ಪಿಲ್ಲರ್ ನ ಮೂಲಕ ಆಹಾರವನ್ನು ಅದಕ್ಕೆ ನೀಡಲಾಗುತ್ತಿತ್ತು.
ಈ ಘಟನೆ ನಡೆದು ಇದೀಗ 70 ವರ್ಷಗಳೇ ಕಳೆದಿವೆ. ಇದು ಘಟಿಸಿದ್ದು ಅಮೆರಿಕಾದ ಕೊಲೇರಾಡೋ ಪಟ್ಟಣದಲ್ಲಿ, 1940 ರಲ್ಲಿ. ಆ ತಲೆಯಿಲ್ಲದ ಕೋಳಿಯನ್ನು ನೋಡಲು ದೂರದ ಊರುಗಳಿಂದ ಕೂಡಾ ಜನರು ಬರಲಾರಂಭಿಸಿದ್ದರು.
ಅಲ್ಲಿನ ವಾಟರ್ಸ್ ಕುಟುಂಬ, ಈ ತಲೆಯಿಲ್ಲದ ಕಾರಣದಿಂದ ಪ್ರಸಿದ್ಧಿಯ ಜತೆಗೆ ದುಡ್ಡು ಕೂಡಾ ಮಾಡಿತ್ತು. ಅದರ ಮಾಲೀಕ ತಾನೂ ಹೋದಲ್ಲೆಲ್ಲ ತಲೆಯಿಲ್ಲದ ಕೊಳಿಯನ್ನು ಡಬ್ಬದಲ್ಲಿ ಹಾಕಿಕೊಂಡು ಹೋಗುತ್ತಿದ್ದ. ‘ ಬನ್ನಿ ತಲೆಯಿಲ್ಲದ ಜೀವಂತ ಕೋಳಿ ತೋರಿಸ್ತೀನಿ ‘ ಅಂತ ಆತ ಬೆಟ್ ಕಟ್ಟಿ ತನಗೆ ಕುಡಿಯಲು ಬೇಕಾದ ಬೀರು ಬ್ಯಾಗಿಗೆ ಇಳಿಸಿಕೊಳ್ಳುತ್ತಿದ್ದ. ಮುಂದೆ ಆ ಕುಟುಂಬ ತಲೆಯಿಲ್ಲದೆ ಬದುಕಿದ, ಸಾಯಲು ನಿರಾಕರಿಸಿದ ಈ ಕೋಳಿಯ ಜತೆ ಹಲವು ರಾಜ್ಯಗಳಿಗೆ ಪ್ರಯಾಣ ಬೆಳೆಸಿದ್ದ. ಸಹಜವಾಗಿ ಪ್ರಸಿದ್ಧಿ ಮತ್ತು ಹಣ ಆ ಕುಟುಂಬದ್ದಾಯಿತು. ಹಾಗೆ ಆ ಕೋಳಿ ತಲೆಯಿಲ್ಲದೆ ಬರೊಬ್ಬರಿ 18 ತಿಂಗಳುಗಳ ಕಾಲ ಬದುಕಿತ್ತು. ಮತ್ತು, ಸಾಯುವ ಮೊದಲು ತನ್ನ ಒಡೆಯನನ್ನು ಶ್ರೀಮಂತನನ್ನಾಗಿ ಮಾಡಿಯೇ ಅದು ಸತ್ತಿತ್ತು.

ಇವತ್ತಿಗೂ ಕೂಡಾ, ತಲೆಯಿಲ್ಲದ ಕೋಳಿಯ ನೆನಪಿಗಾಗಿ ವರ್ಷದ ಮೇ ತಿಂಗಳಿನಲ್ಲಿ ‘ ಹೆಡ್ ಲೆಸ್ ಚಿಕನ್ ಫೆಸ್ಟ್ ‘ ಆಯೋಜಿಸಲಾಗುತ್ತಿದೆ. ಅಲ್ಲದೆ ಮೈಕ್ ಗಾಗಿ ಒಂದು ಪ್ರತಿಮೆಯನ್ನು ಕೂಡಾ ನಿರ್ಮಿಸಲಾಗಿದೆ. ಇಲ್ಲಿ
ಚಿತ್ರದಲ್ಲಿ ಆ ಕುಟುಂಬದ ಮರಿ ಮೊಮ್ಮಗ ಟ್ರಾಯ್ ವಾಟರ್ಸ್ ತಲೆಯಿಲ್ಲದ ಕೋಳಿ ಮೈಕ್ ನ ಪ್ರತಿಮೆಯ ಮುಂದು ನಿಂತಿದ್ದನ್ನು ನೋಡಬಹುದು.

Leave A Reply

Your email address will not be published.