ಊಟ ಮಾಡುವುದಕ್ಕೂ ಮೊದಲು ಎಲೆಯ ಸುತ್ತಲೂ ನೀರು ಸಿಂಪಡಿಸುವುದರ ಹಿಂದಿರುವ ಕಾರಣ ಇಲ್ಲಿದೆ..
ಪುರಾತನ ಕಾಲದಿಂದಲೂ ಆಚಾರ ಸಂಪ್ರದಾಯಗಳನ್ನು ಆಚರಿಸುತ್ತಲೇ ಬಂದಿದೆ. ಅದರಲ್ಲಿ ಕೆಲವೊಂದು ಪದ್ಧತಿಗಳು ಇಂದಿಗೂ ಚಾಲ್ತಿಯಲ್ಲಿದ್ದು,ಇದು ಕೇವಲ ಸಂಪ್ರದಾಯವಲ್ಲದೆ ಜನಜೀವನದ ಮೇಲೆ ಪ್ರಭಾವ ಬೀರಿದೆ. ಹೀಗೆ ಆಹಾರ ಸೇವನೆಯಲ್ಲಿ ಕೆಲವೊಂದು ಸಂಪ್ರದಾಯಗಳಿವೆ.
ಹೌದು.ಆಹಾರ ಸೇವನೆಗೂ ಮುನ್ನ ತಮ್ಮದೇ ಆದ ಒಂದಷ್ಟು ಪದ್ಧತಿಯನ್ನು ಅನುಸರಿಸುತ್ತಾರೆ. ಪ್ರಮುಖ ಪದ್ಧತಿಯೆಂದರೆ ಊಟ ಮಾಡುವುದಕ್ಕೂ ಮೊದಲು, ಆ ತಟ್ಟೆ ಅಥವಾ ಎಲೆಯ ಸುತ್ತಲೂ ನೀರು ಸಿಂಪಡಿಸುವುದು. ಆದರೆ ಯಾಕೆ ಆಚರಣೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಅದೆಷ್ಟೋ ಜನರಿಗೆ ಉತ್ತರ ಗೊತ್ತಿರುವುದಿಲ್ಲ. ಅವರು ಮಾಡುತ್ತಿದ್ದರು, ಹಾಗಾಗಿ ನಾನು ಮಾಡುತ್ತಿದ್ದೇನೆ ಎನ್ನುವವರೇ ಹೆಚ್ಚು. ಈ ಪದ್ಧತಿಗೆ ಕಾರಣ ಏನು ಎಂಬ ಮಾಹಿತಿ ಇಲ್ಲಿದೆ ನೋಡಿ..
ಅಧ್ಯಾತ್ಮಿಕ ಮಹತ್ವ
ಹೀಗೆ ತಟ್ಟೆಯಲ್ಲಿ ಊಟ ಬಡಿಸಿದ ಬಳಿಕ, ಅದನ್ನು ಸೇವನೆ ಮಾಡುವುದಕ್ಕೂ ಮೊದಲು ತಟ್ಟೆಯ ಅಥವಾ ಬಾಳೆಲೆಯ ಸುತ್ತಲೂ ನೀರು ಸಿಂಪಡಿಸುವುದನ್ನು ಅಧ್ಯಾತ್ಮ ಭಾಷೆಯಲ್ಲಿ ಚಿತ್ರಾಹುತಿ ಎಂದು ಕರೆಯುತ್ತಾರೆ. ಈ ಪದ್ಧತಿ ಅತ್ಯಂತ ಹೆಚ್ಚು ಮಹತ್ವ ಪಡೆದಿರುವುದು ಬ್ರಾಹ್ಮಣ ಸಮುದಾಯದಲ್ಲಿ. ಉತ್ತರ ಮತ್ತು ದಕ್ಷಿಣ ಭಾರತದ ಬ್ರಾಹ್ಮಣರು ಸಾಮಾನ್ಯವಾಗಿ ಈ ಕ್ರಮ ಅನುಸರಿಸುತ್ತಾರೆ. ಊಟವನ್ನು ನಾವು ಸೇವಿಸುವುದಕ್ಕೂ ಮೊದಲು ಅದನ್ನು ದೇವರಿಗೆ ಅರ್ಪಿಸಿ, ಈ ಆಹಾರ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸುವ ಸಲುವಾಗಿ ಹೀಗೆ ಊಟದ ತಟ್ಟೆ ಸುತ್ತಲೂ ನೀರು ಸಿಂಪಡಿಸಲಾಗುತ್ತದೆ ಎಂಬುದು ಅಧ್ಯಾತ್ಮಿಕವಾಗಿ ವಿವರಿಸಲ್ಪಟ್ಟದ್ದು.
ತಾರ್ಕಿಕ ಅರ್ಥ ಹೀಗಿದೆ
ಊಟದ ತಟ್ಟೆ ಅಥವಾ ಎಲೆಯ ಸುತ್ತಲೂ ನೀರು ಚಿಮುಕಿಸಲು ಒಂದಷ್ಟು ತಾರ್ಕಿಕ ಕಾರಣವೂ ಇದೆ.ಪುರಾತನ ಕಾಲದಲ್ಲಿದ್ದ ನಮ್ಮ ಋಷಿ-ಮುನಿಗಳೆಲ್ಲ ಮಣ್ಣಿನ ಕುಟೀರದಲ್ಲಿ ವಾಸಿಸುತ್ತಿದ್ದರು. ಆ ಕುಟೀರಗಳೆಲ್ಲ ಸಾಮಾನ್ಯವಾಗಿ ದಟ್ಟವಾದ ಅರಣ್ಯವಾದ ಪ್ರದೇಶದಲ್ಲಿಯೇ ಇರುತ್ತಿದ್ದವು. ಆಗೆಲ್ಲ ತಟ್ಟೆಗಳು ಇರುತ್ತಿರಲಿಲ್ಲ. ಬಾಳೆಲೆಯಲ್ಲೇ ಊಟ-ಉಪಾಹಾರಗಳು ನಡೆಯುತ್ತಿದ್ದವು. ಹೀಗೆ ಊಟಕ್ಕೆ ಕುಳಿತಾಗ ಬಾಳೆಗೆ ಧೂಳು, ಮಣ್ಣು ಬರಬಾರದು ಎಂಬ ಕಾರಣಕ್ಕೆ ಅದರ ಸುತ್ತಲೂ ನೀರು ಹಾಕಿಕೊಳ್ಳುತ್ತಿದ್ದರು. ಈ ಧೂಳು, ಮಣ್ಣಿನಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳು ಇರುತ್ತವೆ. ದೇಹಕ್ಕೆ ಸೇರಿದರೆ ಕಾಯಿಲೆಗಳು ಬರುತ್ತವೆ ಎಂಬ ಕಾರಣಕ್ಕೆ, ಅದರಿಂದ ಪಾರಾಗಲು ನೀರು ಹಾಕಲಾಗುತ್ತಿತ್ತು ಎಂದು ಹೇಳಲಾಗುತ್ತದೆ.
ಅಷ್ಟೇ ಅಲ್ಲ, ಕೀಟಗಳು, ಇರುವೆಗಳು ಊಟದ ಎಲೆಗೆ ಬಾರದೆ ಇರಲಿ ಎಂಬ ಕಾರಣಕ್ಕೂ ಈ ಕ್ರಮ ಅನುಸರಿಸಲಾಗುತ್ತಿತ್ತು ಎಂದೂ ಹೇಳಲಾಗುತ್ತದೆ. ಇದೆಲ್ಲ ಜಾನಪದದಂತೆ, ಒಬ್ಬರಿಂದ ಮತ್ತೊಬ್ಬರಿಗೆ ಹೇಳಿಕೊಂಡು-ಕೇಳಿಕೊಂಡು ಬಂದಿದ್ದೇ ಹೊರತು, ಯಾರೂ ಕಂಡವರಿಲ್ಲ.