ಲ್ಯಾಂಡಿಂಗ್ ವೇಳೆ ಬಿರುಗಾಳಿಗೆ ಸಿಲುಕಿದ ವಿಮಾನ !! | ಕ್ಯಾಬಿನ್ ಲಗೇಜ್ ಗಳು ಬಿದ್ದು ಪ್ರಯಾಣಿಕರಿಗೆ ಗಂಭೀರ ಗಾಯ
ಮುಂಬೈ-ದುರ್ಗಾಪುರ್ ಸ್ಪೈಸ್ ಜೆಟ್ ವಿಮಾನವು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಸಂದರ್ಭದಲ್ಲಿ ಭಾರೀ ಬಿರುಗಾಳಿಗೆ ಸಿಲುಕಿದ ಪರಿಣಾಮ ಕ್ಯಾಬಿನ್ ಲಗೇಜ್ ಗಳು ಬಿದ್ದು ಸುಮಾರು 17 ಪ್ರಯಾಣಿಕರು ಮತ್ತು ವಿಮಾನ ಮೂವರು ಸಿಬ್ಬಂದಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಕೊಲ್ಕತ್ತಾದ ಕಾಜಿ ನಜ್ರುಲ್ ಇಸ್ಲಾಂ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ ವಿಮಾನದಲ್ಲಿ 40 ಜನರಿದ್ದರು. ಟರ್ಬ್ಯೂಲೆನ್ಸ್ ಉಂಟಾಗಿದ್ದರಿಂದ 17 ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಇನ್ನು ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಸ್ಪೈಸ್ ಜೆಟ್ ವಕ್ತಾರರು ಘಟನೆ ಬಗ್ಗೆ ಮಾಹಿತಿ ನೀಡಿದ್ದು, 189 ಆಸನ ಸಾಮರ್ಥ್ಯದ ಬೋಯಿಂಗ್ 737-800 ವಿಮಾನ ಲ್ಯಾಂಡ್ ಆಗುವಾಗ ಚಂಡಮಾರುತದ ಪ್ರಭಾವಕ್ಕೆ ಸಿಲುಕಿದೆ. ಆಗ ಟರ್ಬ್ಯೂಲೆನ್ಸ್ ಉಂಟಾಗಿದೆ. ವಿಮಾನ ಅಲುಗಾಡಲು ಪ್ರಾರಂಭಿಸಿ ಭಾರೀ ಪ್ರಕ್ಷುಬ್ಧತೆ ಉಂಟಾಗಿ ಕ್ಯಾಬಿನ್ ಸಾಮಾಗ್ರಿಗಳು ಪ್ರಯಾಣಿಕರ ಮೇಲೆ ಬಿದ್ದವು. ಇದರಿಂದ ಪ್ರಯಾಣಿಕರು ಗಾಬರಿಯಾಗಿದ್ದರು. ಕೆಲವರಿಗೆ ತಲೆಗೆ ಪೆಟ್ಟು ಬಿದ್ದಿದೆ. ಬೆನ್ನಿಗೆ ಹೊಡೆತ ಬಿದ್ದಿದೆ ಎಂದು ಒಬ್ಬರು ಪ್ರಯಾಣಿಕರು ಹೇಳಿದ್ದಾರೆ ಎಂದರು.
ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ದುರ್ಗಾಪುರ್ ವಿಮಾನ ನಿಲ್ದಾಣದ ಸಿಬ್ಬಂದಿಗಳು ಹೇಳಿದ್ದಾರೆ.