ಸ್ವಂತ ಮನೆಯ ಫ್ರಿಡ್ಜ್ ನ್ನು ಬೀದಿಯಲ್ಲಿ ಇರಿಸಿ ಸಾರ್ವಜನಿಕರ ಬೇಸಿಗೆಯ ದಾಹ ತೀರಿಸಲು ತಣ್ಣನೆಯ ನೀರು ನೀಡುವ ಮಹಾನ್ ವ್ಯಕ್ತಿ!
ಬೇಸಿಗೆಯ ಧಗೆ ಮುಗಿಲು ಮುಟ್ಟಿದ್ದು, ಇದರಿಂದ ಹೇಗಪ್ಪಾ ರಕ್ಷಣೆ ಪಡೆಯೋದು ಎಂಬುದರ ಮಟ್ಟಿಗೆ ತಲುಪಿದೆ.ಇಂತಹ ಸಂದರ್ಭದಲ್ಲಿ ಈ ಉರಿ ಬಿಸಿಲಿನಲ್ಲಿ ಸ್ವಲ್ಪ ತಣ್ಣನೆಯ ಅನುಭವ ಪಡೆಯಲು ಕೋಲ್ಡ್ ವಾಟರ್ ಕಡೆಗೆ ಹೆಚ್ಚಿನ ಜನ ಮುಖ ಮಾಡಿದ್ದಾರೆ. ಹೊರಗಡೆ ಸುತ್ತಾಡಲು ಹೋದಾಗ ‘ಅಯ್ಯೋ’ ಒಂಚೂರು ತಣ್ಣನೆಯ ನೀರು ಸಿಕ್ರೆ ಅದೆಷ್ಟೋ ಒಳ್ಳೆದಿತ್ತು ಅಂದುಕೊಳ್ಳೋರೇ ಹೆಚ್ಚು.
ಇಂತಹ ಸಂದರ್ಭದಲ್ಲಿ ಆ ಪುಣ್ಯವಂತ ದೊರಕಿದರೆ!ಹೌದು.ಇನ್ನೊಬ್ಬನ ದಣಿವಿಗೆ ನೆರವಾದರೆ ಅದಕ್ಕಿಂತ ಒಳ್ಳೆಯ ಆಶೀರ್ವಾದ ಬೇರೊಂದಿಲ್ಲ. ಮಾನವೀಯತೆ ಎಂಬುದು ಮನುಷ್ಯನ ಶ್ರೀಮಂತಿಕೆಯನ್ನೇ ಹೆಚ್ಚಿಸುತ್ತೆ.ಇದೀಗ ಇಂತಹ ಒಂದು ಅದ್ಭುತವಾದ ಸಮಾಜ ಮುಖಿ ಕೆಲಸದಲ್ಲಿ ತೊಡಗಿದ್ದಾರೆ ಈ ಮಹಾನ್ ವ್ಯಕ್ತಿ.
ಸಾಮಾನ್ಯವಾಗಿ ಮನೆಯಲ್ಲಿ ಫ್ರಿಡ್ಜ್ ಇರುವವರು ಮನೆಯಲ್ಲೇ ಕೋಲ್ಡ್ ನೀರು ಕುಡಿಯುತ್ತಾರೆ.ಆದರೆ ಎಲ್ಲರಿಗೂ ಫ್ರಿಡ್ಜ್ ಕೊಳ್ಳಲು ಸಾಧ್ಯವಿಲ್ಲ. ಈ ಕಾರಣಕ್ಕೆ ಕೋಲ್ಕತ್ತಾದ ವ್ಯಕ್ತಿಯೊಬ್ಬರು ತಮ್ಮ ಫ್ರಿಡ್ಜ್ನ್ನು ಬೀದಿಯಲ್ಲಿ ಇಟ್ಟಿದ್ದು, ಬೇಕಾದವರು ಅದರೊಳಗೆ ನೀರಿಟ್ಟು ತಣ್ಣನೆಯ ನೀರು ಕುಡಿಯಬಹುದಾದಾ ಮಹಾನ್ ಕಾರ್ಯ ಮಾಡಿ ಎಲ್ಲರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೋಲ್ಕತ್ತಾದ ಅಲಿಮುದ್ದೀನ್ ಸ್ಟ್ರೀಟ್ನ 29 ವರ್ಷದ ಸ್ಥಳೀಯ ನಿವಾಸಿ ತೌಸಿಫ್ ರೆಹಮಾನ್ ಅವರು ಕೋಲ್ಕತ್ತಾದ ರಸ್ತೆಯ ಬದಿಯಲ್ಲಿ ತಮ್ಮ ಸ್ವಂತ ಫ್ರಿಡ್ಜ್ ಅನ್ನು ತಾತ್ಕಾಲಿಕವಾಗಿ ಸ್ಥಾಪಿಸಿದ್ದಾರೆ. ಪಾದಚಾರಿಗಳು ತಣ್ಣನೆಯ ನೀರು ಕುಡಿದು ದಾಹ ತೀರಿಸಿಕೊಳ್ಳಲಿ ಎಂಬುದು ಅವರ ಉದ್ದೇಶವಾಗಿದ್ದು, ರಸ್ತೆ ಬದಿಯಲ್ಲಿ ರೆಫ್ರಿಜರೇಟರ್ ಇಡುತ್ತಿರುವುದು ಇದೇ ಮೊದಲು.
ಈ ಮೂಲಕ ತೌಸಿಫ್ ಪ್ರೀತಿ ಮತ್ತು ಮಾನವೀಯತೆಗೆ ಹೊಸ ಮಾನದಂಡವನ್ನು ಸೃಷ್ಟಿ ಮಾಡಿದ್ದಾರೆ. ಇವರ ಕ್ರಮವನ್ನು ಅನೇಕರು ಶ್ಲಾಘಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಇವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಬೇರೆಯವರು ಮಾಡಲಿ ಎಂದು ಕೂರುವ ಬದಲು ಇವರು ಒಂದು ಒಳ್ಳೆಯ ಕಾರ್ಯವನ್ನು ತಾವೇ ಮಾಡಿದ್ದು, ಇತರರಿಗೆ ಪ್ರೇರಣೆಯಾಗಿದ್ದಾರೆ. ಜೊತೆಗೆ ಮಾನವೀಯ ಮೌಲ್ಯಗಳು ಇನ್ನು ಜೀವಂತವಾಗಿದೆ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.