ಮದುವೆ ಸಮಾರಂಭದಲ್ಲಿ ನಿಜವಾದ ಹಾವನ್ನೇ ಹಿಡಿದುಕೊಂಡು “ನಾಗಿಣಿ” ನೃತ್ಯ !! – ವೀಡಿಯೋ ವೈರಲ್
ಮದುವೆ ಸಮಾರಂಭಗಳಲ್ಲಿ ನೃತ್ಯ ಮಾಡುವುದು ಮಾಮೂಲಿ. ಆದರೆ ಇಲ್ಲೊಂದು ಕಡೆ ನಡೆದ ವಿವಾಹ ಸಮಾರಂಭದಲ್ಲಿ ‘ಮೈನ್ ನಾಗಿನ್ (ನಾನು ನಾಗಿಣಿ)’ ಗೀತೆಗೆ ನಿಜವಾದ ಹಾವನ್ನೇ ಹಿಡಿದು ತಂದು ನೃತ್ಯ ಮಾಡುತ್ತಿದ್ದ ಐವರು ಆರೋಪಿಗಳನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.
ಒಡಿಶಾದ ಮಯೂರ್ಬಾಹನ್ನ ಕರಾಂಜಿಯಾ ಸ್ಟ್ರೀಟ್ ನಲ್ಲಿ ನಡೆದ ವಿವಾಹ ವೇದಿಕೆಯಲ್ಲಿ ಹಾವಿನೊಂದಿಗೆ ನೃತ್ಯ ಮಾಡಲಾಗಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಪಟ್ಟಣದ ಬೀದಿಯಲ್ಲಿ ಪುಂಡರು ಬಿದಿರುಬುಟ್ಟಿಯಲ್ಲಿ ತಂದಿದ್ದ ಹಾವನ್ನು ಪ್ರದರ್ಶಿಸಿದ್ದಾರೆ. ಹಾವಿನೊಂದಿಗೆ ನೃತ್ಯ ಮಾಡುವುದನ್ನೂ ತೋರಿಸಿದ್ದಾರೆ. ಘಟನಾ ಸ್ಥಳದಿಂದ ಭಯಭೀತರಾದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿ ನಾಗರ ಹಾವನ್ನು ರಕ್ಷಿಸಿದ್ದಾರೆ.
ಸರೀಸೃಪವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಹಾವಾಡಿಗ ಸೇರಿದಂತೆ 5 ಜನರನ್ನು ಬಂಧಿಸಲಾಗಿದೆ. ವಿಚಾರಣೆ ನಡೆಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆ 1982ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೀಡಿಯೋದಲ್ಲಿ ಹೆಚ್ಚಿನ ಡೆಸಿಬಲ್ ಸಂಗೀತದಿಂದ ಹಾವು ಭಯಗೊಂಡಂತೆ ಕಂಡುಬಂದಿದೆ. ನೃತ್ಯ ಮಾಡುವುದಕ್ಕೂ ಮುನ್ನ ಹಾವಿನ ವಿಷಪೂರಿತ ಹಲ್ಲುಗಳನ್ನು ತೆಗೆದಿದ್ದು, ಇದು ಕಾನೂನುಬಾಹಿರವಾಗಿದೆ. ಇಂತಹ ಹೇಯ ಕೃತ್ಯಕ್ಕೆ ಅವಕಾಶ ನೀಡಿದ ವರ ಮತ್ತು ಅವರ ತಂದೆಯ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇನೆ ಎಂದು ಸ್ನೇಕ್ ಸಹಾಯವಾಣಿ ಸಂಚಾಲಕರು ಹೇಳಿದ್ದಾರೆ.