ಬರೋಬ್ಬರಿ 2000 ಕಡಕ್ನಾಥ್ ಕೋಳಿ ಖರೀದಿಸಿದ ಎಂ.ಎಸ್.ಧೋನಿ!
ಎಂ.ಎಸ್.ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವುದು ಎಲ್ಲರಿಗೂ ತಿಳಿದ ವಿಷಯ. ಈಗ ಧೋನಿ ಕೃಷಿ, ಕೋಳಿ ಸಾಕಾಣಿಕೆಯತ್ತ ಗಮನ ಹರಿಸಿದ್ದಾರೆ. ಅದರ ಮುಂದುವರಿದ ಭಾಗವಾಗಿ ಇತ್ತೀಚೆಗೆ ಧೋನಿ, ಕಡಕ್ನಾಥ್ ತಳಿಯ ಸುಮಾರು 2000 ಕೋಳಿಗಳನ್ನು ಖರೀದಿಸಿದ್ದಾರೆ. ಮಧ್ಯಪ್ರದೇಶದ ಝಬುವಾ ಜಿಲ್ಲೆಯ ಸಹಕಾರಿ ಸಂಸ್ಥೆಯಿಂದ ಧೋನಿ ಈ ಕೋಳಿಗಳನ್ನು ತಮ್ಮ ಫಾರ್ಮ್ಹೌಸ್ಗೆ ತರಿಸಿದ್ದಾರೆ. ಈ ಕೋಳಿಯ ಮೊಟ್ಟೆ ಹಾಗೂ ಮಾಂಸ ಇತರೆ ತಳಿಗಳಿಗಿಂತ ದುಬಾರಿ.
ಮಹೇಂದ್ರ ಸಿಂಗ್ ಧೋನಿ ಫಾರ್ಮ್ ಹೌಸ್ನಲ್ಲಿ ಕಡಕ್ನಾಥ್ ತಳಿಯ ಕೋಳಿ ಸಾಕಾಣಿಕೆಗೆ ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಹಿಂದೆಯೇ ಧೋನಿ ತಮ್ಮ ಫಾರ್ಮ್ ಹೌಸ್ನಲ್ಲಿ ಕಡಕ್ನಾಥ್ ತಳಿಯ ಕೋಳಿ ಸಾಕಾಣಿಕೆ ಮಾಡಲು ಒಲವು ತೋರಿದ್ದರು. ಆದರೆ ಹಕ್ಕಿಜ್ವರದ ಭೀತಿಯಿಂದಾಗಿ ಈ ಯೋಜನೆಯನ್ನು ಅನಿವಾರ್ಯವಾಗಿ ಮುಂದೂಡಿದ್ದರು. ಈಗ ಮತ್ತೆ ಇದರ ಬಗ್ಗೆ ಆಸಕ್ತಿ ಮೂಡಿದ್ದು, ಈ ಮೂಲಕ ತಮ್ಮ ಪಶುಸಂಗೋಪನೆಯ ಒಲವನ್ನು ಧೋನಿ ವ್ಯಕ್ತಪಡಿಸಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಸದ್ಯ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಧೋನಿ, ಮುಂಬೈ ಇಂಡಿಯನ್ಸ್ ಎದುರು ಭರ್ಜರಿಯಾಗಿ ಮ್ಯಾಚ್ ಫಿನಿಶ್ ಮಾಡಿ ಮಿಂಚಿದ್ದರು.