ತಾನು ಸಾಕಿದ ನಾಯಿಯ ಜೀವಕ್ಕೆ ಅಪಾಯ ಎದುರಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ
ಕೆಲವೊಬ್ಬರು ತಾವು ಸಾಕಿದ ಪ್ರಾಣಿಗಳ ಮೇಲೆ ಜೀವವನ್ನೇ ಇಟ್ಟುಕೊಂಡಿರುತ್ತಾರೆ. ಅವುಗಳು ಎಲ್ಲಿಯಾದರೂ ಕಳೆದುಹೋದರೆ, ಅವುಗಳಿಗೆ ಪೆಟ್ಟಾದರೆ ಅಥವಾ ಸತ್ತು ಹೋದರೆ ಅನ್ನ, ನೀರು ಬಿಟ್ಟು ಅಳುತ್ತಾ ಕೂರುತ್ತಾರೆ. ಅಂತೆಯೇ ಪ್ರಾಣಿಪ್ರೇಮಿಯಾಗಿರುವ ಹೈದರಬಾದ್ ನ ಯುವತಿಯೊಬ್ಬಳು ತನ್ನ ನಾಯಿಯ ಜೀವಕ್ಕೆ ಅಪಾಯ ಎದುರಾಗಿದೆ ಎಂದು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.
ಹೈದರಾಬಾದ್ ನಲ್ಲಿ ಬೀತ್ ಎನಿಮಲ್ ರೆಸ್ಕ್ ಸೆಂಟರ್ ನಡೆಸುತ್ತಿರುವ ಎಸ್. ಸಾಯಿ ಶ್ರೀ ಎಂಬಾಕೆಯಿಂದ ಮಾರ್ಚ್ 06 ರಂದು ಉಡುಪಿಯ ರೀನಾ ಎಂಬವರು ಬ್ಲ್ಯಾಕಿ ಮತ್ತು ಕ್ರೀಂ ಎಂಬ ಹೆಸರಿನ ಎರಡು ನಾಯಿಗಳನ್ನು ದತ್ತು ತೆಗೆದುಕೊಂಡಿದ್ದರು. ಸ್ವಲ್ಪ ದಿನಗಳ ನಂತರ ರೀನಾ ಅವರು ಸಾಯಿಶ್ರೀಗೆ ಕರೆ ಮಾಡಿ ಬ್ಲ್ಯಾಕಿ ನಾಯಿ ಕೆಟ್ಟಗುಣಗಳನ್ನು ಹೊಂದಿದ್ದು, ಅದನ್ನು ವಾಪಸ್ಸು ಮಾಡುವುದಾಗಿ ತಿಳಿಸಿದ್ದಾರೆ.
ಆದರೆ ವಾಪಸ್ ಮಾಡದೆ ನಾಯಿಯನ್ನು ಬ್ರಹ್ಮಾವರದ ವ್ಯಕ್ತಿಗೆ ಕೊಟ್ಟಿದ್ದು, ಅವರು ಇನ್ನೊಬ್ಬ ವ್ಯಕ್ತಿಗೆ ಕೊಟ್ಟಿದ್ದಾರೆ. ಬ್ಲ್ಯಾಕಿ ನಾಯಿಯನ್ನು ಸುರಕ್ಷತೆ ಇಲ್ಲದ ಜಾಗಕ್ಕೆ ಸ್ಥಳಾಂತರಿಸಿ ಅಪಾಯ ಸ್ಥಿತಿಗೆ ಸಿಲುಕುವಂತೆ ಮಾಡಲಾಗಿದೆ ಎಂದು ಆರೋಪಿಸಿ ಎಸ್. ಸಾಯಿ ಶ್ರೀ ಅವರು ಪ್ರಾಣಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿದ್ದಾರೆ.