ಚಲಿಸುತ್ತಿದ್ದ ರೈಲು ನೋಡಿ ಮೂರ್ಛೆ ಹೋಗಿದ್ದಲ್ಲದೆ ಅದೇ ರೈಲಿನ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ಪೊಲೀಸ್ ಪೇದೆ !! | ಭೀಕರ ಘಟನೆಯ ವೀಡಿಯೋ ವೈರಲ್
ಚಲಿಸುತ್ತಿದ್ದ ರೈಲು ನೋಡಿ ಮೂರ್ಛೆ ಹೋದ ಕರ್ತವ್ಯ ನಿರತ ಪೊಲೀಸ್ ಪೇದೆಯೊಬ್ಬರು ಅದೇ ರೈಲಿನ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿರುವ ದುರಂತ ಘಟನೆಯೊಂದು ಬೆಳಕಿಗೆ ಬಂದಿದೆ. ಶನಿವಾರ ರಾತ್ರಿ ಆಗ್ರಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಈ ದೃಶ್ಯ ದಾಖಲಾಗಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ವೀಡಿಯೋದಲ್ಲಿರುವಂತೆ ಕರ್ತವ್ಯ ನಿರತರಾಗಿದ್ದ ಪೊಲೀಸ್ ಪೇದೆಯೊಬ್ಬರು ಖಾಲಿ ಪ್ಲಾಟ್‌ಫಾರ್ಮ್‌ನಲ್ಲಿ ಆರಾಮವಾಗಿ ನಿಂತಿರುತ್ತಾರೆ. ಈ ವೇಳೆ ಪಕ್ಕದ ಹಳಿ ಮೇಲೆ ಗೂಡ್ಸ್ ರೈಲು ಆಗಮಿಸುತ್ತದೆ. ಕೊಂಚ ಹೊತ್ತು ಆ ಕಡೆ ನೋಡದ ಪೇದೆ ಬಳಿಕ ಚಲಿಸುತ್ತಿದ್ದ ರೈಲನ್ನು ನೋಡುತ್ತಾರೆ. ಚಲಿಸುತ್ತಿದ್ದ ರೈಲು ನೋಡುತ್ತಲೇ ಅವರು ಮೂರ್ಛೆ ಬಂದು ತಲೆ ಸುತ್ತಿ ತಮ್ಮ ದೇಹದ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಾರೆ. ನೋಡ ನೋಡುತಲ್ಲೇ ಸುತ್ತುತ್ತಾ ಹೋಗಿ ಚಲಿಸುತ್ತಿದ್ದ ರೈಲಿನ ಕೆಳಗೆ ಬೀಳುತ್ತಾರೆ. ಪಕ್ಕದಲ್ಲೇ ಇದ್ದ ವ್ಯಕ್ತಿ ಆಘಾತದಿಂದ ಹಾಗೇ ನೋಡುತ್ತಲೇ ಇರುತ್ತಾನೆ. ದೂರದಲ್ಲಿದ್ದ ವ್ಯಕ್ತಿಯೊಬ್ಬರು ಇದನ್ನು ನೋಡಿ ಓಡಿ ಬರುತ್ತಾರೆಯಾದರೂ ಅಷ್ಟು ಹೊತ್ತಿಗಾಗಲೇ ಪೇದೆ ರೈಲಿನ ಕೆಳಗೆ ಬಿದ್ದಿರುತ್ತಾರೆ.
ಮೃತ ಪೇದೆಯನ್ನು ಉತ್ತರ ಪ್ರದೇಶದ ಬಿಜ್ನೋರ್ ನಿವಾಸಿ ರೀಗಲ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ. ಇವರು ನಿಲ್ದಾಣದಲ್ಲಿ ಟಿಕೆಟ್ ಪರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಮೃತ ಪೇದೆ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರು 2011 ರಲ್ಲಿ ಯುಪಿ ಪೊಲೀಸ್ ಪಡೆಗೆ ಸೇರಿದ್ದರು ಮತ್ತು 2021 ರಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಗಮನಿಸುವ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಗೆ ವರ್ಗಾಯಿಸಲಾಗಿತ್ತು ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಅಪಘಾತದ ಬಳಿಕ ಪೇದೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟು ಹೊತ್ತಿಗೆ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ದೇಹವನ್ನು ಪರೀಕ್ಷಿಸಿದ ವೈದ್ಯರು ಪೇದೆ ಸಾವನ್ನು ಖಚಿತಪಡಿಸಿದ್ದಾರೆ ಎನ್ನಲಾಗಿದೆ.
ಏನಿದು ವಿಚಿತ್ರ ಸಮಸ್ಯೆ?
ಪ್ರಸ್ತುತ ತಲೆ ಸುತ್ತಿ ಬಿದ್ದ ಪೇದೆ ರೀಗಲ್ ಕುಮಾರ್ ಸಿಂಗ್ ಗೈರೇಟರಿ ಸೆಳೆತ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇದೊಂದು ರೀತಿಯ ಮೂರ್ಛೆರೋಗದ ಲಕ್ಷಣವಾಗಿದ್ದು, ಈ ಸಮಸ್ಯೆ ಕಾಣಿಸಿಕೊಂಡಾಗ ವ್ಯಕ್ತಿ ದೇಹದ ಮೇಲಿನ ನಿಯಂತ್ರಣ ಕಳೆದುಕೊಂಡು ತನ್ನದೇ ದೇಹದ ಸುತ್ತ ತಿರುಗಿ ಬೀಳುತ್ತಾನೆ. ದೇಹ ಅಕ್ಷದ ಸುತ್ತ ವೃತ್ತಾಕಾರದ ಅಥವಾ ಸುರುಳಿಯಾಕಾರದ ರೀತಿಯಲ್ಲಿ ಕನಿಷ್ಠ 180 ಅಥವಾ 360 ಡಿಗ್ರಿಗಳಷ್ಟು ತಿರುಗುತ್ತದೆ. ನಂತರ ಚಲಿಸುತ್ತಿರುವ ರೈಲಿನ ಕೆಳಗೆ ಕುಸಿಯುತ್ತಾನೆ. ತಜ್ಞರು ಈ ಸಮಸ್ಯೆಯನ್ನು ಅಪರೂಪದ ಆರೋಗ್ಯ ಸಮಸ್ಯೆ ಎಂದು ಪರಿಗಣಿಸಿದ್ದಾರೆ.