ಉಡುಪಿ : ಹಿಜಾಬ್ ಗಾಗಿ ಪಟ್ಟು ಹಿಡಿದ ವಿದ್ಯಾರ್ಥಿನಿಯರಿಂದ ಪರೀಕ್ಷಾ ಕೇಂದ್ರದಲ್ಲಿ ಹೈಡ್ರಾಮ ! ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುವುದಾಗಿ ಏರು ಧ್ವನಿಯಲ್ಲಿ ಗಲಾಟೆ !
ಉಡುಪಿ : ಹಿಜಾಬ್ ವಿವಾದಕ್ಕೆ ಮೂಲ ಪ್ರಾರಂಭ ಎಂದು ಗುರುತಿಸಲ್ಪಡುವ ಉಡುಪಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರ ಪೈಕಿ ಇಬ್ಬರು ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ತಮ್ಮ ಕಾಲೇಜಿಗೆ ಆಗಮಿಸಿದ್ದು ಈ ವೇಳೆ ಹೈಡ್ರಾಮ ನಡೆಸಿದ್ದಾರೆ.
ಈ 6 ವಿದ್ಯಾರ್ಥಿನಿಯರ ಪೈಕಿ ಇಬ್ಬರು ಪ್ರಥಮ ಪಿಯುಸಿ ವಿದ್ಯಾರ್ಥಿನಿಯರಾಗಿದ್ದು, ಉಳಿದ ನಾಲ್ವರು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಈ ಹಿಜಾಬ್ ಗಾಗಿ ಆಗ್ರಹಿಸಿ ಹೋರಾಟ ನಡೆಸಿದವರು. ಅನಂತರ ಎಲ್ಲರಿಗೂ ತಿಳಿದಿರುವ ಹಾಗೇ ಅದು ರಾಜ್ಯವ್ಯಾಪಿ ಹಬ್ಬಿತ್ತು. ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಅಗ್ರಹಿಸಿ ಕೋರ್ಟು ಮೆಟ್ಟಿಲು ಹತ್ತಿದ್ದವರು ಇದೇ ವಿದ್ಯಾರ್ಥಿಗಳು. ಹೈಕೋರ್ಟಿನ ತ್ರಿಸದಸ್ಯ ಪೀಠವೂ ಸರಕಾರದ ಸಮವಸ್ತ್ರ ಆದೇಶವನ್ನು ಎತ್ತಿ ಹಿಡಿದಿತ್ತು.
ಈ ಆರು ವಿದ್ಯಾರಿಗಳ ಪೈಕಿ, ಪ್ರಥಮ ಪಿಯುಸಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ಈಗಾಗಾಲೇ ಹಿಜಾಬ್ ಗಾಗಿ ಪಟ್ಟು ಹಿಡಿದು ಅದಕ್ಕೆ ಅವಕಾಶ ಸಿಗದೇ ಅಂತಿಮ ಪರೀಕ್ಷೆಗಳಿಗೆ ಗೈರು ಹಾಜರಾಗಿದ್ದರು.ಹೀಗಾಗಿ ಉಳಿದ ನಾಲ್ವರು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯುವ ನಿರ್ಧಾರದ ಬಗ್ಗೆ ಕುತೂಹಲ ಉಳಿದಿತ್ತು.
ಇಂದು ನಾಲ್ವರ ಪೈಕಿ ಇಬ್ಬರಿಗೆ ಪರೀಕ್ಷೆ ಇತ್ತು. ಹಿಜಾಬ್ ಧರಿಸಿ ಈ ಇಬ್ಬರು ವಿದ್ಯಾರ್ಥಿನಿಯರು ಇಂದು ಬೆಳಿಗ್ಗೆ ಕಾಲೇಜಿಗೆ ಆಗಮಿಸಿದ್ದಾರೆ. ಇವರಿಬ್ಬರಯ ಪರೀಕ್ಷೆ ಬರೆಯುವ ಕೇಂದ್ರದ ಒಳಗಡೆಯೂ ಹಿಜಾಬ್ ಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದು ಅವಕಾಶ ಸಿಗದೇ ಪರೀಕ್ಷೆ ಬರೆಯದೇ ಮನೆ ಕಡೆಗೆ ತೆರಳಿದ್ದಾರೆ.
ಆಲಿಯಾ ಅಸಾದಿ ಮತ್ತು ರೇಶಂ ಗೆ ಇಂದು ಬ್ಯುಸಿನೆಸ್ ಸ್ಟಡಿ ಪರೀಕ್ಷೆ ಇದ್ದ ಕಾರಣ ಪರೀಕ್ಷೆಯ ಕೊನೆಯ ಕ್ಷಣದಲ್ಲಿ ಈ ವಿದ್ಯಾರ್ಥಿನಿಯರು ಪರೀಕ್ಷಾ ಕೇಂದ್ರಕ್ಕೆ ಬಂದು, ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಹಿಂಬದಿಯ ಗೇಟ್ ಮೂಲಕ ಪರೀಕ್ಷಾ ಕೇಂದ್ರ ಕ್ಕೆ ಬಂದು ಹಾಲ್ ಟಿಕೆಟ್ ಪಡೆದು ಕೊಂಡಿದ್ದಾರೆ.
ಬುರ್ಖಾ ತೊಟ್ಟು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ವಿದ್ಯಾರ್ಥಿನಿಯರು ಹಾಲ್ ಟಿಕೆಟ್ ಪಡೆದು ಹಿಜಾಬ್ ಧರಿಸಿಯೇ ಪರೀಕ್ಷೆಗೆ ಹಾಜರಾಗುತ್ತೇವೆ ಅಂತಾ ಪಟ್ಟು ಹಿಡಿದಿದ್ದಾರೆ. ಈ ವೇಳೆ ಪರೀಕ್ಷೆ ಕೊಠಡಿಯಲ್ಲಿದ್ದ ಸಿಬ್ಬಂದಿ ಸರ್ಕಾರದ ಸುತ್ತೋಲೆ, ಹೈ ಕೋರ್ಟ್ ನ ಆದೇಶದ ಬಗ್ಗೆ ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿದ್ದರೂ, ವಿದ್ಯಾರ್ಥಿನಿಯರು ಸಿಬ್ಬಂದಿ ಜೊತೆ ಗಟ್ಟಿ ಸ್ವರದಲ್ಲಿ ವಾಗ್ವಾದ ಮಾಡಿದ ಕಾರಣ ಪರೀಕ್ಷಾ ಕೇಂದ್ರಕ್ಕೆ ತಹಶೀಲ್ದಾರ್ ಅರ್ಚನಾ ಭಟ್, ಉಡುಪಿ ನಗರ ಠಾಣಾ ಪೊಲೀಸರು ಆಗಮಿಸಿ ವಿದ್ಯಾರ್ಥಿನಿಯರ ಜೊತೆ ಮಾತುಕತೆ ನಡೆಸಿದ್ದಾರೆ.
ಅವರ ಮಾತಿಗೂ ಬಗ್ಗದ, ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಪರೀಕ್ಷಾ ಕೊಠಡಿಯೊಳಗೆ ತೆರಳಿ ಪರೀಕ್ಷೆ ಬರೆಯೋದಾಗಿ ಪಟ್ಟು ಹಿಡಿದಿದ್ದರು. ಮನವೊಲಿಕೆಗೆ ಬಗ್ಗದಿದ್ದಾಗ ಅಧಿಕಾರಿಗಳು ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳ ಎಚ್ಚರಿಕೆಯ ಹಿನ್ನಲೆಯಲ್ಲಿ ವಿದ್ಯಾರ್ಥಿನಿಯರಾದ ಆಲಿಯಾ ಅಸದಿ ಮತ್ತು ರೇಶಂ ಪರೀಕ್ಷೆ ಬರೆಯದೇ ಪರೀಕ್ಷಾ ಕೇಂದ್ರದಿಂದ ಹೊರನಡೆದಿದ್ದಾರೆ.