ಈ ಮೊಬೈಲ್ ಶಾಪ್ ಗೆ ಎಂಟ್ರಿ ಕೊಟ್ರೆ 1ಲೀಟರ್ ಪೆಟ್ರೋಲ್ ಹಾಗೂ 2 ಲಿಂಬೆಹಣ್ಣು ಉಚಿತ!!

ಕೋವಿಡ್, ಉಕ್ರೇನ್- ರಷ್ಯಾ ಯುದ್ಧ,ಅಕಾಲಿಕ ಮಳೆಯಿಂದಾಗಿ ದಿನನಿತ್ಯ ಬಳಸುವ ವಸ್ತುಗಳ ಬೆಲೆಯು ಅಧಿಕವಾಗುತ್ತಲೇ ಇದೆ. ಕೂಲಿ ಕೆಲಸ ಮಾಡಿ ಜೀವನ ನಡೆಸುವವರು ತಲೆಯಮೇಲೆ ಕೈಯಿಟ್ಟು ಕೂರುವ ಪರಿಸ್ಥಿತಿ ಎದುರಾಗಿದೆ. ತರಕಾರಿಯಿಂದ ಹಿಡಿದು ಪೆಟ್ರೋಲ್, ಡೀಸೆಲ್ ಬೆಲೆಯೂ ಕೂಡ ಅಧಿಕವಾಗುತ್ತಲೇ ಇದ್ದು ಅದರ ಜೊತೆಗೆ ಲಿಂಬೆಹಣ್ಣಿನ ಬೆಲೆ ಕೂಡ ಅಧಿಕವಾಗಿದೆ. ಈ ಹಿಂದೆ ನೀರುಳ್ಳಿ ಬೆಲೆ ಅಧಿಕವಾದ ಸಂದರ್ಭದಲ್ಲಿ ಮದುವೆ ಸಮಾರಂಭಗಳಿಗೆ ನೀರುಳ್ಳಿಯನ್ನು ಗಿಫ್ಟ್ ನೀಡುವಂತಹ ಹಲವು ತಮಾಷೆ ವಿಡಿಯೋಗಳು ವೈರಲ್ ಆಗಿತ್ತು. ಇದೀಗ ಇದೇ ಸಾಲಿಗೆ ಲಿಂಬೆಹಣ್ಣು ಕೂಡ ಸೇರ್ಪಡೆಗೊಂಡಿದೆ.

ಹೌದು.ನಿಂಬೆಹಣ್ಣಿಗೆ 10 ರಿಂದ 15 ರೂ.ಗಳ ನಡುವೆ ಬೆಲೆ ಇದ್ದು,ಈ ದುಬಾರಿ ಲಿಂಬೆಹಣ್ಣನ್ನು ಕೂಡ ಮದುವೆಗೆ ಗಿಫ್ಟ್ ಕೊಡುವ ಸ್ಥಿತಿಗೆ ಬಂದು ತಲುಪಿದೆ.ಗುಜರಾತ್‌ನ ರಾಜ್‌ಕೋಟ್‌ನಲ್ಲಿ ವರನೊಬ್ಬ ತನ್ನ ಮದುವೆ ಸಮಾರಂಭವೊಂದರಲ್ಲಿ ತನ್ನ ಸ್ನೇಹಿತರು ಮತ್ತು ಸಂಬಂಧಿಕರಿಂದ ಮದುವೆಯ ಉಡುಗೊರೆಯಾಗಿ ನಿಂಬೆಹಣ್ಣುಗಳನ್ನು ಉಡುಗೊರೆಯಾಗಿ ಪಡೆದಿದ್ದಾನೆ.ಅಷ್ಟು ದುಬಾರಿಯಪ್ಪ ನಮ್ಮ ಕಾಲ.ಇಲ್ಲೊಂದು ಕಡೆ ಈ ದುಬಾರಿ ಲಿಂಬೆಹಣ್ಣನ್ನುಅಸ್ತ್ರವಾಗಿ ಉಪಯೋಗಿಸಿಕೊಂಡು, ಮೊಬೈಲ್ ಅಂಗಡಿಯವ ಗ್ರಾಹಕರನ್ನು ಸೆಳೆಯಲು ಮಾಡಿದ ಕೆಲಸ ನೋಡಿದ್ರೆ ಅವನನ್ನು ಮೆಚ್ಚುವಂತದ್ದೆ ಆಗಿದೆ.

ಈ ಘಟನೆವಾರಣಾಸಿಯಲ್ಲಿ ನಡೆದಿದ್ದು, ಇಲ್ಲಿಯ ಮೊಬೈಲ್ ಅಂಗಡಿ ಮಾಲೀಕರೊಬ್ಬರು ತಮ್ಮ ಅಂಗಡಿಯ ಹೊರಗೆ 10,000 ಮೌಲ್ಯದ ಮೊಬೈಲ್ ಖರೀದಿಸಿದರೆ 1 ಲೀಟರ್ ಪೆಟ್ರೋಲ್ ಅನ್ನು ಉಚಿತವಾಗಿ ನೀಡಲಾಗುತ್ತದೆ ಎಂಬ ಪೋಸ್ಟರ್ ಗಳನ್ನು ಅಂಟಿಸಿದ್ದಾರೆ. ಇಷ್ಟೇ ಅಲ್ಲ, ಯಾರಾದರೂ ಅವರ ಅಂಗಡಿಯಿಂದ 100 ರೂಪಾಯಿ ಮೌಲ್ಯದ ಮೊಬೈಲ್ ಗೆ ಸಂಬಂಧಿಸಿದ ವಸ್ತುಗಳನ್ನು ತೆಗೆದುಕೊಂಡರೆ, ಅವರಿಗೆ 2 ನಿಂಬೆಹಣ್ಣುಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಇದೀಗ ಈ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಆಫರ್ ಕುರಿತು ಮಾತನಾಡಿದ ಅಂಗಡಿಯವರು,’ಮೊಬೈಲ್ ಫೋನ್ ಅಗತ್ಯವಿರುವವರು ಅಥವಾ ಟೆಂಪರ್ಡ್ ಗ್ಲಾಸ್, ಫೋನ್ ಕವರ್ ಮುಂತಾದ ವಸ್ತುಗಳನ್ನು ಖರೀದಿಸಲು ಬಯಸುವವರು ಈ ಕೊಡುಗೆಯ ಲಾಭದ ಬಗ್ಗೆ ಯೋಚಿಸುತ್ತಿದ್ದಾರೆ. ಈ ಕೊಡುಗೆಗೆ ಗ್ರಾಹಕರಿಂದ ಅದ್ಭುತ ಪ್ರತಿಕ್ರಿಯೆ ದೊರೆತಿದೆ ಎಂದು ಹೇಳಿದ್ದಾರೆ.

Leave A Reply

Your email address will not be published.