ಇನ್ನು ಮುಂದೆ ಮಂಗಳನ ಅಂಗಳದಲ್ಲಿ ಕಟ್ಟಬಹುದು ಅರಮನೆ !! | ಕೆಂಪು ಗ್ರಹದಲ್ಲಿ ಕಟ್ಟಡ ಕಟ್ಟಲು ಸಿದ್ಧವಾಗಿದೆ ಇಟ್ಟಿಗೆ

ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ. ಈಗಾಗಲೇ ಮಂಗಳನ ಮೇಲೆ ಕಾಲಿಟ್ಟಿರುವ ಮನುಷ್ಯ ಇನ್ನುಮುಂದೆ ಅಲ್ಲೇ ವಾಸ ಮಾಡಲು ಬೇಕಾದ ತಯಾರಿಗಳು ಈಗಾಗಲೇ ಆರಂಭವಾಗಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಆದರೆ ಇದು ಸತ್ಯ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಸಹಯೋಗದೊಂದಿಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಸಂಶೋಧಕರು ಮಂಗಳ ಗ್ರಹದಲ್ಲಿ ಕಟ್ಟಡದಂತಹ ರಚನೆಗಳನ್ನು ನಿರ್ಮಿಸಲು ಬಳಸಬಹುದಾದ ಬಾಹ್ಯಾಕಾಶ ಇಟ್ಟಿಗೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇದರಿಂದ ಇನ್ನು ಮುಂದೆ ಕೆಂಪು ಗ್ರಹದಲ್ಲಿಯೂ ಮಾನವ ಮನೆಕಟ್ಟಿ ನೆಲೆಸಬಹುದಂತೆ !!

ಮಂಗಳ ಗ್ರಹದ ಮಣ್ಣು, ಬ್ಯಾಕ್ಟಿರಿಯಾ ಮತ್ತು ಯೂರಿಯಾ ಒಳಗೊಂಡಂತೆ ಸಮರ್ಥನೀಯ ವಿಧಾನದಲ್ಲಿ ಇಟ್ಟಿಗೆ ತಯಾರಿಸಲಾಗಿದೆ. ಪಿಎಲ್ ಒಎಸ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಈ ಬಾಹ್ಯಾಕಾಶ ಇಟ್ಟಿಗೆಗಳನ್ನು ತಯಾರಿಸುವ ವಿಧಾನವನ್ನು ವಿವರಿಸಲಾಗಿದೆ ಎಂದು ಐಐಎಸ್ ಸಿ ಹೇಳಿಕೆ ಬಿಡುಗಡೆ ಮಾಡಿದೆ.


Ad Widget

Ad Widget

Ad Widget

ಮಂಗಳ ಗ್ರಹದ ಮಣ್ಣು, ಸ್ಪೊರೊಸಾರ್ಸಿನಾ ಪಾಸ್ಟೂರಿ ಎಂದು ಕರೆಯುವ ಬ್ಯಾಕ್ಟಿರಿಯಾ, ಯೂರಿಯಾ ಮತ್ತು ನಿಕಲ್ ಕ್ಲೋರೈಡ್ ನನ್ನು ಬೆರೆಸಿ ಮೊದಲು ಸ್ಲರಿಯನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಸ್ಲರಿಯನ್ನು ಯಾವುದೇ ಅಪೇಕ್ಷಿತ ಆಕಾರದ ಅಚ್ಚುಗಳಲ್ಲಿ ಸುರಿಯಬಹುದು ಮತ್ತು ಕೆಲವು ದಿನಗಳಲ್ಲಿ ಬ್ಯಾಕ್ಟೀರಿಯಾ ಯೂರಿಯಾವನ್ನು ಕ್ಯಾಲ್ಸಿಯಂ ಕಾರ್ಬೋನೇಟ್ ಹರಳುಗಳಾಗಿ ಪರಿವರ್ತಿಸುತ್ತದೆ. ಈ ಹರಳುಗಳು ಸೂಕ್ಷ್ಮಜೀವಿಗಳಿಂದ ಸ್ರವಿಸುವ ಬಯೋಪಾಲಿಮರ್‌ಗಳೊಂದಿಗೆ, ಮಣ್ಣಿನ ಕಣಗಳನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಸಿಮೆಂಟ್ ಆಗಿ ಕಾರ್ಯನಿರ್ವಹಿಸುತ್ತವೆ ಎಂದು ಐಐಎಸ್ ಸಿ ಹೇಳಿದೆ.

ಈ ವಿಧಾನದ ಅನುಕೂಲವೆಂದರೆ ಇದು ಇಟ್ಟಿಗೆ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ರಂಧ್ರಗಳ ಜಾಗದಲ್ಲಿ ಒಳನುಸುಳುವ ಬ್ಯಾಕ್ಟೀರಿಯಾಗಳು ಕಣಗಳನ್ನು ಒಟ್ಟಿಗೆ ಬಂಧಿಸಲು ತಮ್ಮದೇ ಆದ ಪ್ರೋಟೀನ್‌ ಬಳಸುತ್ತವೆ, ಸಾಂದ್ರತೆಯನ್ನು ಕಡಿಮೆ ಮಾಡುತ್ತವೆ ಮತ್ತು ಬಲವಾದ ಇಟ್ಟಿಗೆಗಳಿಗೆ ಕಾರಣವಾಗುತ್ತದೆ ಎಂದು ಐಐಎಸ್ ಸಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರೊಬ್ಬರು ತಿಳಿಸಿದ್ದಾರೆ.

ತಂಡವು ಲ್ಯಾಬ್-ಆನ್-ಎ-ಚಿಪ್ ಸಾಧನವನ್ನು ಅಭಿವೃದ್ಧಿಪಡಿಸಿದೆ. ಇದು ಸೂಕ್ಷ್ಮ ಪರಿಸ್ಥಿತಿಗಳಲ್ಲಿ ಬ್ಯಾಕ್ಟೀರಿಯಾದ ಚಟುವಟಿಕೆಯನ್ನು ಅಳೆಯುವ ಗುರಿಯನ್ನು ಹೊಂದಿದೆ. ಭವಿಷ್ಯದಲ್ಲಿ ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸ್ಥಿತಿಗಳಲ್ಲಿ ಪ್ರಯೋಗಗಳನ್ನು ಮಾಡುವ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಸಾಧನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಐಐಎಸ್ ಸಿ ಡಿಬಿಟಿ ಬಯೋಕೇರ್ ಫೆಲೋ ಮತ್ತು ಅಧ್ಯಯನದ ಮೊದಲ ಲೇಖಕಿ ರಶ್ಮಿ ದೀಕ್ಷಿತ್ ವಿವರಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: