ಪದವಿ ಮುಗಿಸಿ ಎರಡು ವರ್ಷ ಕೆಲಸಕ್ಕಾಗಿ ಅಲೆದರೂ ಸಿಗಲಿಲ್ಲ ಉದ್ಯೋಗ | ಹಾಗಂತ ಸುಮ್ಮನೆ ಕೂರದೆ ಚಾಯ್‍ವಾಲಿಯಾಗಿ ದೇಶದ ಗಮನ ಸೆಳೆದ ಅರ್ಥಶಾಸ್ತ್ರ ಪದವೀಧರೆ !!
ಭಾರತದಲ್ಲಿ ಈಗಲೂ ಅದೆಷ್ಟೋ ಮಂದಿ ನಿರುದ್ಯೋಗಿಗಳಿದ್ದಾರೆ. ಎಷ್ಟೇ ಪ್ರಯತ್ನಪಟ್ಟರೂ ತಮ್ಮ ಓದಿಗೆ ಸರಿಯಾದ ಕೆಲಸ ಸಿಗದೆ ಪ್ರತಿದಿನ ನೋವಿನಲ್ಲೇ ಜೀವನ ಸಾಗಿಸುವವರ ನಡುವೆ ಇಲ್ಲೊಬ್ಬಳು ಸುಮ್ಮನೆ ಮನೆಯಲ್ಲಿ ಕೂರದೆ ಚಹಾದ ಅಂಗಡಿ ತೆರೆದು ಸಮಾಜಕ್ಕೆ ಮಾದರಿಯಾಗಿದ್ದಾಳೆ.
ಎರಡು ವರ್ಷ ಎಷ್ಟೇ ಅಲೆದಾಡಿದರೂ ಕೆಲಸ ಸಿಗದ ಕಾರಣ ಅರ್ಥಶಾಸ್ತ್ರ ಪದವೀಧರೆಯಾದ ಈಕೆ ಟೀ ಸ್ಟಾಲ್ ಸ್ಟಾಪಿಸುವ ಮೂಲಕ ಗಮನ ಸೆಳೆದಿದ್ದಾರೆ. ಪಟ್ನಾದ ಮಹಿಳಾ ಕಾಲೇಜು ಬಳಿ ಬಿಹಾರದ ಪ್ರಿಯಾಂಕಾ ಗುಪ್ತಾ ಈ ಸಾಹಸಕ್ಕೆ ಕೈಹಾಕಿದ ಯುವತಿ. 2019ರಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪ್ರಿಯಾಂಕಾ ಗುಪ್ತಾ ಪದವಿ ಪಡೆದುಕೊಂಡಿದ್ದರು. ಬಳಿಕ ಉದ್ಯೋಗಕ್ಕಾಗಿ ಅನೇಕ ಬಾರಿ ಹುಡುಕಾಟ ನಡೆಸಿದ್ದರು. ಸೂಕ್ತ ಕೆಲಸಕ್ಕಾಗಿ ಹಲವು ಕಂಪೆನಿಗಳಲ್ಲಿ ಪ್ರಯತ್ನಪಟ್ಟರೂ ಪ್ರಯೋಜನವಾಗಲಿಲ್ಲ. ಪದವಿ ಪಡೆದುಕೊಂಡರೂ ಉದ್ಯೋಗ ಸಿಗದ ಕಾರಣ ಮುಂದೇನು ಮಾಡುವುದು ಎಂದು ಯೋಚಿಸುತ್ತಿದ್ದರು. ಹೀಗಿರುವಾಗಲೇ ಅವರಿಗೆ ತಾನೇಕೆ ಟೀ ಸ್ಟಾಲ್ ತೆರೆಯಬಾರದೆಂಬ ಯೋಚನೆ ಬಂದಿದೆ.
ಟೀ ಅಂಗಡಿ ತೆರೆಯುವ ಆಲೋಚನೆ ತಲೆಗೆ ಹೊಳೆದ ತಕ್ಷಣವೇ ಪ್ರಿಯಾಂಕಾ ಹಿಂದೆಮುಂದೆ ಯೋಚಿಸಲಿಲ್ಲ. ಇಂದು ಪದವಿ ಪಡೆದುಕೊಂಡಿದ್ದರೂ ಅನೇಕರು ಕೈಕಟ್ಟಿಕೊಂಡು ಮನೆಯಲ್ಲಿ ಕುಳಿತ್ತಿದ್ದಾರೆ. ಆದರೆ ಪ್ರಿಯಾಂಕಾ ಅವರು ಧೈರ್ಯದಿಂದಲೇ ತಾನು ಟೀ ಸ್ಟಾಲ್ ತೆರೆದು ಬದುಕು ಕಟ್ಟಿಕೊಳ್ಳಬೇಕೆಂಬ ನಿರ್ಧಾರ ಮಾಡಿದ್ದಾರೆ. ಅದರಂತೆ ಅವರು ಪಟ್ನಾದ ಮಹಿಳಾ ಕಾಲೇಜು ಬಳಿ ಟೀ ಅಂಗಡಿ ಪ್ರಾರಂಭಿಸಿ ಯಶಸ್ವಿಯಾಗಿ ಬ್ಯುಸಿನೆಸ್ ಮಾಡುತ್ತಿದ್ದಾರೆ.
ತಾವು ಟೀ ಸ್ಟಾಲ್ ತೆರೆದಿರುವ ಬಗ್ಗೆ ಸುದ್ದಿಗಾರರ ಜೊತೆಗೆ ಮಾತನಾಡಿರುವ ಪ್ರಿಯಾಂಕಾ, ‘ನಾನು 2019ರಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪದವಿ ಪಡೆದುಕೊಂಡಿದ್ದೇನೆ. ಆದರೆ, ಕಳೆದ 2 ವರ್ಷಗಳಲ್ಲಿ ಕೆಲಸ ಪಡೆಯಲು ಸಾಧ್ಯವಾಗಲಿಲ್ಲ. ಎಂಬಿಎ ಪದವೀಧರರಾಗಿರುವ ಅಹಮದಾಬಾದ್‍ನ ಪ್ರಫುಲ್ ಬಿಲ್ಲೋರ್ ಅವರಿಂದ ನಾನು ಸ್ಫೂರ್ತಿ ಪಡೆದುಕೊಂಡಿದ್ದೇನೆ. ಪ್ರಸ್ತುತ ದೇಶದಲ್ಲಿ ಅನೇಕ ಚಾಯ್‍ವಾಲಾಗಳಿದ್ದಾರೆ. ಚಾಯ್‍ವಾಲಿ ಏಕೆ ಇರಬಾರದು’ ಎಂದು ಪ್ರಶ್ನಿಸಿದ್ದಾರೆ.
ಉದ್ಯೋಗ ತ್ಯಜಿಸಿ ಅಹಮದಾಬಾದ್‍ನಲ್ಲಿ ‘ಎಂಬಿಎ ಚಾಯ್‍ವಾಲಾ’ ಎಂಬ ಟೀ ಸ್ಟಾಲ್ ಆರಂಭಿಸಿ ಜನಪ್ರಿಯರಾಗಿರುವ ಪ್ರಫುಲ್ ಬಿಲ್ಲೋರ್ ಕೂಡ ಪ್ರಿಯಾಂಕಾ ಗುಪ್ತಾರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಪ್ರಿಯಾಂಕಾರನ್ನು ಸಂಪರ್ಕಿಸಲು ಬೇಕಾದ ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಅಲ್ಲದೆ ಭಾರತದ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ ಸಾಧಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದು ಕಾಮೆಂಟ್ ಮಾಡಿದ್ದಾರೆ.