‘ನಾನು ಎಲ್ಲರಂತೆ ಡಾಕ್ಟರ್ ಅಥವಾ ಇಂಜನಿಯರ್ ಆಗಲು ಆಗಲಿಲ್ಲ ಸಾರಿ ಮಗಳೇ’ ಎಂದ ಆಟೋ ಡ್ರೈವರ್ !|ಮಗಳ ಉತ್ತರಕ್ಕೆ ಭಾವುಕವಾದ ಇಂಟರ್ನೆಟ್
ಆತ ಹೆಣ್ಣು ಮಗಳೊಬ್ಬಳ ಅಪ್ಪ. ಮಗಳು ಓದಿದಳು, ಬಹುಶಃ ಕೆಲಸಕ್ಕೂ ಸೇರಿ ಒಳ್ಲೆಯ ಪೊಸಿಷನ್ ಗೆ ಹೋಗಿರಬಹುದು. ಸನ್ನಿವೇಶ ಓದಿದರೆ ಹಾಗನ್ನಿಸುತ್ತದೆ. ಅಂತಹ ಒಂದು ಸಂಜೆ ಮಗಳನ್ನು ಕರೆದು ಅಪ್ಪ ಹೇಳ್ತಾನೆ, ಕೀಳರಿಮೆಯಿಂದಲೇ, ಮತ್ತು ಮಗಳನ್ನು ಯಾವತ್ತೂ ನೋಯಿಸಬಾರದು ಎಂಬ ಕಾಳಜಿಯಿಂದ !!
“ನಾನು ಎಲ್ಲ ಪೋಷಕರಂತೆ ಇಂಜಿನಿಯರ್ ಅಥವಾ ಡಾಕ್ಟರ್ ಆಗಲಿಲ್ಲ, ಸಾರಿ ಮಗಳೇ; ನಿನ್ನಪ್ಪ ಟ್ಯಾಕ್ಸಿ ಡ್ರೈವರ್ ಅಂತ ನೀನು ಯಾರಿಗೂ ಹೇಳಬೇಕಾಗಿಲ್ಲ ” ಎಂದು ಅದೊಂದು ಬಾರಿ ಆ ಹೆಣ್ಣು ಮಗಳ ಅಪ್ಪ ಹೇಳ್ತಾನೆ. ಓದಿರುವ ಮಗಳಿಗೆ, ಅದೆಲ್ಲಿ ಬೇರೆ ಹೈ ಪ್ರೊಫೈಲ್ ಸಹವರ್ತಿಗಳ ಎದುರು ಆಟೋ ಡ್ರೈವರ್ ನ ಮಗಳು ಎಂದು ಅವಮಾನ ಆದೀತೋ ಎಂದು !
ಅಪ್ಪನ ಈ ಮಾತನ್ನು ಮಗಳು ತನ್ನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು,” ನೀನು ಸಾಕಪ್ಪ… ನೀನು ಸಾಕಪ್ಪ ” ಎಂದು ಹಾಡಿನ ಮೂಲಕ ಆಕೆ ಶೇರ್ ಮಾಡಿದ ಇನ್ಸ್ಟಾಗ್ರಾಮ್ ಇವತ್ತು ಹಲವರ ಭಾವವನ್ನು ಕೆದಕಿದೆ. ಅಪ್ಪನ ಮಾತು ಕೇಳಿ ಅವತ್ತು ಮಗಳು ಹಾಕಿದ್ದ ಕಣ್ಣೀರು ಇವತ್ತು ಸೋಶಿಯಲ್ ಮೀಡಿಯಾದಲ್ಲಿ ಆ ಪೋಸ್ಟ್ ನೋಡಿದ ಹಲವು ಹೆಣ್ಣು ಮನಸ್ಸಿನ ಜನರ ಕಣ್ಣಲ್ಲಿ ನೀರು ಜಿನುಗಿಸಿದೆ.
ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ತಂದೆ-ಮಗಳ ಈ ವಿಡಿಯೋ ವೈರಲ್ ಆಗಿದೆ. ಈ ವೀಡಿಯೋ ನನ್ನ ಬದುಕಿಗೆ ಅನ್ನ ನೀಡುವ ಟ್ಯಾಕ್ಸಿ ಡ್ರೈವರ್ ವೃತ್ತಿಗಾಗಿ ತನ್ನ ಮಗಳಿಗೆ ಕ್ಷಮೆಯಾಚಿಸಿದಂತಹ ಮುಗ್ಧ ತಂದೆಯ ಹೃದಯಸ್ಪರ್ಶಿ ಕಥೆಯಾಗಿದೆ. ಅದಕ್ಕೆ ಅವರ ಮಗಳ ಪ್ರತಿಕ್ರಿಯೆ ಮಾತ್ರ ಎಂತಹ ಕಲ್ಲುಬಂಡೆಯನ್ನೂ ಕರಗಿಸುವಂಥದ್ದು. ಅವಳು ತನ್ನ ತಂದೆಗೆ “ನೀನು ಇದ್ದ ಹಾಗೆಯೇ ಸಾಕು” ಎಂದು ಹೇಳುವ ಸುಂದರವಾದ ವೀಡಿಯೋ ಹಂಚಿಕೊಂಡಿದ್ದಾಳೆ. ಇಂಟರ್ನೆಟ್ ಭಾವುಕವಾಗಿದೆ.
ಈ ವೀಡಿಯೋವನ್ನು ಮೂಲತಃ ಇನ್ಸ್ಟಾಗ್ರಾಮ್ ಬಳಕೆದಾರ ಮೊಹುಯಾ ತನ್ನ ವೈಯಕ್ತಿಕ ಪ್ರೊಫೈಲ್‌ನಲ್ಲಿ ವಿವರಣಾತ್ಮಕ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾಳೆ. “ನಾನು ಬೆಳೆದ ಪ್ರದೇಶದಲ್ಲಿ, ಹೆಚ್ಚಿನವರು ಒಳ್ಲೆಯ ವೃತ್ತಿಗಳಲ್ಲಿ ಇದ್ದು ಹೆಚ್ಚಿನ ಆದಾಯದ ವ್ಯಕ್ತಿಗಳಾಗಿದ್ದಾರೆ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ನಮ್ಮ ಸ್ಥಿತಿಯು ನಮ್ಮ ಕೆಲಸದ ಮೇಲೆ ತಾನೇ ಅವಲಂಬಿತವಾಗಿರುವುದು ? ಅದು ನಿಜವಲ್ಲ, ಆದರೂ ಅದೇ ತಾನೇ ನಡೀತಿರೋದು ?!
ನನ್ನ ಅಪ್ಪನದು ಕಡಿಮೆ ದುಡಿಮೆ ತರುವ ಕೆಲಸ. ನನ್ನ ತಂದೆಯು ನಮ್ಮ ಸುತ್ತಮುತ್ತ ಇರುವ ಇತರ ಸಮುದಾಯದ ಇತರ ಅನೇಕ ತಂದೆಗಳೊಂದಿಗೆ ಗೆಳೆತನ ಹೊಂದಲು ಸಾಧ್ಯವಾಗಲಿಲ್ಲ, ಕಾರಣ ಅವರ ಈ ವೃತ್ತಿ. ಇದರಿಂದಾಗಿ ಅವರು ಸಾಕಷ್ಟು ಒತ್ತಡವನ್ನು ಅನುಭವಿಸಿದರು. ಅವರು ಕೀಳರಿಮೆ ಹೊಂದಿ, ನನಗೆಲ್ಲಿ ನೋವಾಗುತ್ತದೆ ಯೋ ಎಂದುಕೊಂಡು ” ಪರ್ವಾಗಿಲ್ಲ, ನೀ ಟ್ಯಾಕ್ಸಿ ಓಡಿಸೋ ವ್ಯಕ್ತಿಯ ಮಗಳು ಎಂದು ಯಾರ್ಗೂ ಹೇಳಬೇಕಾಗಿಲ್ಲ ” ಅಂದಿದ್ದಾರೆ. ಆದರೆ ನಾನು ಅವರ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ ಎಂದು ಅವರಿಗೆ ತಿಳಿಸಲು ಬಯಸುತ್ತೇನೆ” ಎಂದಾಕೆ ಹೇಳಿದ್ದಾಳೆ. ಆಕೆಯ ಥರ ಇರುವ ಹಲವು ಸೋ ಕಾಲ್ಡ್ ಕೆಳವರ್ಗದ ಕುಟುಂಬದಲ್ಲಿನ ಅಪ್ಪಂದಿರ ಪ್ರೀತಿಯ ಹೆಣ್ಣು ಮಕ್ಕಳು ಮುಂದೆ ಬಂದು, ” ನನ್ನಪ್ಪ ಲಾರಿ ಡ್ರೈವರ್, ನನ್ನಪ್ಪ ಕೂಲಿ ಕಾರ್ಮಿಕ, ನನ್ನಪ್ಪ ಮೇಸ್ತ್ರಿ ” …” ಬಟ್ ಈ ಲವ್ ಯು ಪಪ್ಪಾ ” ಅಂದಿದ್ದಾರೆ. ಇಡೀ ಇಂಟರ್ನೆಟ್ ಆಕೆಗಾಗಿ ಕಣ್ಣು ಒದ್ದೆ ಮಾಡಿಕೊಂಡಿದೆ.
ಗುಡ್ ನ್ಯೂಸ್ ಮೂವ್‌ಮೆಂಟ್ ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಮರು-ಹಂಚಿಕೊಂಡ ನಂತರ ಕ್ಲಿಪ್ ಮತ್ತೆ ಜನರ ಗಮನವನ್ನು ಸೆಳೆಯಿತು. “ಕಷ್ಟಪಟ್ಟು ದುಡಿಯುವ ಎಲ್ಲ ಪೋಷಕರಿಗೆ… ಅವರು ಇರುವಷ್ಟೇ ಸಾಕು ಎಂದು ತಿಳಿಸಿ. ಈ ಸುಂದರವಾದ ಗೌರವವನ್ನು ಪ್ರೀತಿಸಿ! ” ಅವರು ವೀಡಿಯೊವನ್ನು ಬರೆದು ಮರು ಪೋಸ್ಟ್ ಮಾಡಿದ್ದಾರೆ.
ಈ ತಂದೆ-ಮಗಳ ಬಾಂಧವ್ಯದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗುತ್ತಿದೆ. ಇಂಥದ್ದು ಇನ್ನಷ್ಟು ವೈರಲ್ ಆಗಲೇಬೇಕು !