ಸಿಎಂ ಗೆ ಕಾರು ಬೇಕೆಂದು, ನಡುಬೀದಿಯಲ್ಲಿ ಕುಟುಂಬವೊಂದನ್ನು ಇಳಿಸಿ, ಕಾರನ್ನು ಕೊಂಡು ಹೋದ ಪೊಲೀಸರು ;

ತಿರುಪತಿಗೆಂದು ಹೊರಟಿದ್ದ ಕುಟುಂಬದ ಎಸ್ಕಾರ್ಟ್ ವಾಹನವನ್ನು ತಡೆದು ನಿಲ್ಲಿಸಿ, ಸಿಎಂಗೆ ಎಸ್ಕಾರ್ಟ್ ಬೇಕೆಂದು ಬಲವಂತವಾಗಿ ಕೊಂಡೊಯ್ದ ಘಟನೆಯೊಂದು ಬುಧವಾರ ನಡೆದಿದೆ.

ಶುಕ್ರವಾರ ಒಂಗೋಲ್‌ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಭೇಟಿ ನೀಡಲಿದ್ದಾರೆ. ಇದೇ ವೇಳೆ ಪಲ್ನಾಡು ವಿನುಕೊಂಡದ ವೇಮುಲ
ಶ್ರೀನಿವಾಸ್ ಮತ್ತು ಇಬ್ಬರು ಮಹಿಳೆಯರು,
ಇಬ್ಬರು ಮಕ್ಕಳು ಸೇರಿದಂತೆ ಕುಟುಂಬ ಸದಸ್ಯರು ಇನ್ನೋವಾ ಕಾರಿನಲ್ಲಿ ತಿರುಪತಿಗೆ ಹೊರಟಿದ್ದರು. ಬುಧವಾರ ರಾತ್ರಿ ಒಂಗೋಲ್‌ನ ಸಮೀಪದ ಹೋಟೆಲ್‌ನಲ್ಲಿ ಊಟಕ್ಕೆಂದು ಇವರ ಕುಟುಂಬ ನಿಂತಿತ್ತು. ಆದರೆ, ಆಗ ಸ್ಥಳಕ್ಕೆ ಬಂದ ಕಾನ್‌ಸ್ಟೇಬಲ್ ಸಿಎಂ ಬರುತ್ತಿದ್ದಾರೆ, ಕಾರು ಬೇಕೆಂದು ಹೇಳಿದ್ದಾನೆ.

ಆಗ ನಾವು ತಿರುಪತಿಗೆ ತೀರ್ಥಯಾತ್ರೆಗೆಂದು ಬಂದಿರೋರು, ಎಂದು ಕುಟುಂಬದ ಸದಸ್ಯರು ಹೇಳಿದ್ದರೂ ಕೇಳದೆ, ಇಡೀ ಕುಟುಂಬವನ್ನು ರಸ್ತೆಯಲ್ಲೇ ನಿಲ್ಲಿಸಿ ಚಾಲಕನ ಸಮೇತವಾಗಿ ಇನ್ನೋವಾ ತೆಗೆದುಕೊಂಡು ಹೋಗಿದ್ದಾರಂತೆ.

ಇದರಿಂದ ಮಹಿಳೆಯರು, ಮಕ್ಕಳು ಇಡೀ ಕುಟುಂಬ ಬಸ್ ನಿಲ್ದಾಣದಲ್ಲಿ ರಾತ್ರಿ ಕಳೆಯುವಂತೆ ಆಗಿದೆ. ಈ ಘಟನೆ ಸುದ್ದಿಯಾಗುತ್ತಿದ್ದಂತೆ ಟಿಡಿಪಿ ಅಧ್ಯಕ್ಷ, ಮಾಜಿ ಸಿಎಂ ಎನ್.ಚಂದ್ರಬಾಬು ನಾಯ್ಡು ತೀವ್ರವಾಗಿ ಖಂಡಿಸಿದ್ದಾರೆ.

ಈ ಘಟನೆಯ ಬಗ್ಗೆ ತಿಳಿದ ಸ್ವತಃ ಸಿಎಂ ಜಗನ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಜನ ಸಾಮಾನ್ಯರಿಗೆ ತೊಂದರೆ ನೀಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ತಕ್ಷಣವೇ ಆ ಕುಟುಂಬ ಕಾರು ಮರಳಿ ತಲುಪಿಸಲು ಹೇಳಿದ್ದು, ಮುಂದೆ ಇಂತಹ ಘಟನೆಗಳನ್ನು ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಘಟನೆಗೆ ಕಾರಣವಾದ ಹೋಂಗಾರ್ಡ್ ತಿರುಪತಿ ರೆಡ್ಡಿ ಹಾಗೂ ಸಹಾಯಕ ವಾಹನ ಇನ್‌ಸ್ಪೆಕ್ಟರ್ ಸಂಧ್ಯಾ ಎಂಬುವವರನ್ನು ಅಮಾನತು ಮಾಡಲಾಗಿದೆ.

Leave A Reply

Your email address will not be published.