ಬಿಜೆಪಿ ಸದಸ್ಯನ ಭೀಕರ ಹತ್ಯೆ ಮಾಡಿದ ದುಷ್ಕರ್ಮಿಗಳು ; ಸಿಸಿಟಿವಿಯಲ್ಲಿ ಸುಳಿವಿಗಾಗಿ ಹುಡುಕಾಟ !

ಬುಧವಾರ ಬಿಜೆಪಿ ಸದಸ್ಯನೋರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆಯೊಂದು ಪೂರ್ವ ದೆಹಲಿಯ ಗಾಜಿಪುರ ಪ್ರದೇಶದಲ್ಲಿ ನಡೆದಿದೆ. ಹತ್ಯೆಗೀಡಾದ ವ್ಯಕ್ತಿ ಬಿಜೆಪಿ ಸದಸ್ಯ ಎಂದು ವರದಿಯಾಗಿದೆ.

 

ಮೃತರನ್ನು ಜೀತು ಚೌಧರಿ ಎಂದು ಗುರುತಿಸಲಾಗಿದ್ದು, ಬಿಜೆಪಿಯ ಮಯೂರ್ ವಿಹಾರ್ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಪೂರ್ವ) ಪ್ರಿಯಾಂಕಾ ಕಶ್ಯಪ್ ಹೇಳದ್ದಾರೆ. ಪೊಲೀಸರ ಪ್ರಕಾರ, ಘಟನೆ ನಿನ್ನೆ ರಾತ್ರಿ 8.15ರ ಸುಮಾರಿಗೆ ನಡೆದಿದೆ. ಗಾಜಿಪುರ ಪೊಲೀಸ್ ಠಾಣೆಯ ಬೀಟ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಮಯೂರ್ ವಿಹಾರ್ ಪ್ರದೇಶದ ಬಳಿ ಜನರ ಗುಂಪು ನೋಡಿ, ಚದುರಿಸಲು ತೆರಳಿದಾಗ, ಹತ್ಯೆಯ ಬಗ್ಗೆ ತಿಳಿದು ಬಂದಿದೆ.

ಮನೆಯ ಮುಂಭಾಗದ ರಸ್ತೆಯಲ್ಲಿ ವ್ಯಕ್ತಿಯೋರ್ವ ಗುಂಡೇಟಿನಿಂದ ಬಿದ್ದಿರುವುದು ಕಂಡಿದೆ. ರಕ್ತಸ್ರಾವದಿಂದ ಬಿದ್ದಿದ್ದ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ವೈದ್ಯರು ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಹತ್ಯೆಯ ಸುಳಿವು ಸಿಗದಿರುವುದರಿಂದ ಪ್ರತ್ಯಕ್ಷದರ್ಶಿಗಳು ಮುಂದೆ ಬಂದು ಸಾಕ್ಷಿ ಹೇಳುವಂತೆ ಪೊಲೀಸರು ಕೋರಿದ್ದಾರೆ. ಈ ನಡುವೆ ಸಿಸಿಟಿವಿಯಲ್ಲಿ ಸುಳಿವಿಗಾಗಿ ಹುಡುಕಾಟ ಜಾರಿಯಲ್ಲಿದೆ.

‘ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಹಂತಕರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ’ ಎಂದು ಉಪ ಪೊಲೀಸ್ ಆಯುಕ್ತ (ಪೂರ್ವ) ಪ್ರಿಯಾಂಕಾ ಕಶ್ಯಪ್ ತಿಳಿಸಿದ್ದಾರೆ.

ಹತ್ಯೆಗೈದ ಆರೋಪಿ ಗಡಿ ದಾಟದಂತೆ ಎಲ್ಲೆಡೆ ನಾಕಾಬಂಧಿ ಹಾಕಲಾಗಿದ್ದು, ಘಟನಾ ಸ್ಥಳದಲ್ಲಿ ಖಾಲಿ ಕಾಟ್ರಿಜ್ ಪತ್ತೆಯಾಗಿದ್ದು, ಕೆಲ ಸಾಕ್ಷಿಗಳು ಪತ್ತೆಯಾಗಿವೆ. ತನಿಖೆ ತೀವ್ರಗೊಳಿಸಲಾಗಿದೆ ಎಂದು ಪೂರ್ವ ವಿಭಾಗದ ಪೂರ್ವ ಡಿಸಿಪಿ ಪ್ರಿಯಾಂಕಾ ಹೇಳಿದ್ದಾರೆ.

Leave A Reply

Your email address will not be published.