ಕಡಬ : ಸರಕಾರಿ ಶಾಲೆಯ ಪೈಪ್ ಲೈನ್, ನಳ್ಳಿ,ಗೇಟಿಗೆ ಹಾನಿ : ದೈವದ ಮೊರೆ ಹೋದ ಶಾಲಾಭಿವೃದ್ದಿ ಸಮಿತಿ
ಕಡಬ: ಕೊಯಿಲ ಗ್ರಾಮದ ಕೊಯಿಲ ಕೆ ಸಿ ಫಾರ್ಮ್ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿನ ಕೃಷಿ ತೋಟಕ್ಕೆ ಮತ್ತು ಕುಡಿಯುವ ನೀರಿಗಾಗಿ ಅಳವಡಿಸಿದ ಪೈಪುಗಳಿಗೆ , ನಳ್ಳಿಗಳಿಗೆ, ಗೇಟಿನ ಸರಳುಗಳಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ ಎಂದು ಶಾಲಾಭಿವೃದ್ದಿ ಸಮಿತಿಯಿಂದ ಕಡಬ ಠಾಣೆಗೆ ದೂರು ನೀಡಲಾಗಿದೆ.
ಎರಡು ಕುಡಿಯುವ ನೀರಿನ ನಳ್ಳಿಗಳನ್ನು , ಮೂರು ಕಡೆ ಕೃಷಿ ತೋಟದ ಪೈಪುಗಳನ್ನು ಮುರಿಯಲಾಗಿದೆ. ಆವರಣಕ್ಕೆ ಪ್ರವೇಶಿಸುವ ಮುಖ್ಯ ದ್ವಾರದ ಗೇಟಿನ ಸರಳನ್ನು ಮುರಿದಿದ್ದಾರೆ. ಮಂಗಳವಾರ ರಾತ್ರಿ ಸಮಯದಲ್ಲಿ ಕಿಡಿಗೇಡಿಗಳಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಕೃಷಿ ತೋಟದ ಕೆಲಸ ಸಂಬಂದ ಬುಧವಾರ ಎಸ್ ಡಿ ಎಂ ಸಿ ಪದಾಧಿಕಾರಿಗಳು ಶಾಲಾ ಆವರಣಕ್ಕೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ಎಸ್ ಡಿ ಎಂ ಸಿ ಅಧ್ಯಕ್ಷ ವಿಶ್ವನಾಥ ಯಾನೆ ಶಶಿ ಕುಮಾರ್ ನೀಡಿರುವ ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ದೈವಗಳಿಗೆ ಮೊರೆ
ಈ ಕೃತ್ಯದ ವಿರುದ್ದ ಶಾಲಾಭಿವೃದ್ದಿ ಸಮಿತಿ, ಪೋಷಕರಿಂದ ದೈವಗಳಿಗೆ ಮೊರೆಯಿಟ್ಟ ಬ್ಯಾನರ್ ಶಾಲಾ ಆವರಣದಲ್ಲಿ ಆಳವಡಿಸಲಾಗಿದೆ. ಈ ಕೃತ್ಯ ಎಸೆದವರಿಗೆ ಆತೂರು ಶ್ರೀ ದುಗಾಲಯಿ ದೈವ , ಬರಮೇಲು ಶ್ರೀ ಶಿರಾಡಿ ದೈವ, ನೆಹರುತೋಟ ಶ್ರೀ ಕೊರಗಜ್ಜ ದೈವಕ್ಕೆ ಹರಕೆ ಇಟ್ಟಿದ್ದೇವೆ ಎಂದು ಬ್ಯಾನರ್ ನಲ್ಲಿ ಉಲ್ಲೇಖಿಸಲಾಗಿದೆ.
(ಕೃತ್ಯದ ವಿರುದ್ದ ಶಾಲಾಭಿವೃದ್ದಿ ಸಮಿತಿ, ಪೋಷಕರಿಂದ ದೈವಗಳಿಗೆ ಮೊರೆಯಿಟ್ಟ ಬ್ಯಾನರ್ ಶಾಲಾ ಆವರಣದಲ್ಲಿ ಆಳವಡಿಸಲಾಗಿದೆ.)