ನಾಲ್ಕು ದಶಕಗಳ ಬಳಿಕ ಪಾಕ್ ಮೂಲದ 63 ಕುಟುಂಬಗಳಿಗೆ ಯುಪಿಯಲ್ಲಿ ಅಧಿಕೃತ ನೆಲೆ !! | ಮುಖ್ಯಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಮನೆ ಪತ್ರದ ಜೊತೆಗೆ ಕೃಷಿ ಭೂಮಿ ಹಸ್ತಾಂತರಿಸಿದ ಸಿಎಂ ಯೋಗಿ ಆದಿತ್ಯನಾಥ್

ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಬಳಿಕ ಯೋಗಿ ಉತ್ತರಪ್ರದೇಶದಲ್ಲಿ ಒಂದೊಂದೇ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಅಂತೆಯೇ ಇದೀಗ ಪೂರ್ವ ಪಾಕಿಸ್ತಾನದಿಂದ 1970 ರಲ್ಲಿ ಸ್ಥಳಾಂತರಿಸಲ್ಪಟ್ಟ 63 ಹಿಂದೂ ಬಂಗಾಳಿ ಕುಟುಂಬಗಳಿಗೆ ಮುಖ್ಯಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಮನೆ ಪತ್ರದ ಜೊತೆಗೆ ಕೃಷಿ ಭೂಮಿಯನ್ನು ಸಿಎಂ ಯೋಗಿ ಆದಿತ್ಯನಾಥ್ ಇಂದು ನೀಡಿದ್ದಾರೆ.

ಇಂದು ಲೋಕಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, 38 ವರ್ಷಗಳ ಸುದೀರ್ಘ ಕಾಯುವಿಕೆ ಕೊನೆಗೊಂಡಿದೆ. 1970ರಲ್ಲಿ, ಪೂರ್ವ ಪಾಕಿಸ್ತಾನದಿಂದ 407 ಕುಟುಂಬಗಳು ಭಾರತಕ್ಕೆ ಬಂದವು. ಕೆಲವು ಕುಟುಂಬಗಳಿಗೆ ದೇಶದ ವಿವಿಧ ಭಾಗಗಳಲ್ಲಿ ಪುನರ್ವಸತಿ ಕಲ್ಪಿಸಲಾಯಿತು. 65 ಕುಟುಂಬಗಳು ಪುನರ್ವಸತಿಗಾಗಿ ಕಾಯುತ್ತಿದ್ದವು. ಆ ಪೈಕಿ 63 ಕುಟಂಬಗಳಿಗೆ ಪುನರ್ವಸತಿ ಕಲ್ಪಿಸಲಾಗಿದ್ದು, ಇನ್ನೂ ಎರಡು ಕುಟುಂಬಗಳು ಎಲ್ಲಿಯೂ ಪತ್ತೆಯಾಗಿಲ್ಲ ಎಂದು ಹೇಳಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡು ಎಕರೆ ಕೃಷಿ ಭೂಮಿ ಹಾಗೂ ವಸತಿಗಾಗಿ 200 ಮೀಟರ್‌ ಜಮೀನು ನೀಡಿದೆ. ಇದಲ್ಲದೇ ಮುಖ್ಯಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ 1.20 ಲಕ್ಷ ರೂ.ಗಳನ್ನು ನೀಡಲಾಗಿದೆ. ಪ್ರತಿ ಮನೆಗೆ ಶೌಚಾಲಯವನ್ನು ಒದಗಿಸಲಾಗುವುದು ಎಂದರು.

ಈ 63 ಕುಟುಂಬಗಳಿಗೆ ನೀಡಿರುವ ಜಮೀನನ್ನು ಶಾಲೆ, ಆಸ್ಪತ್ರೆ ಸೇರಿದಂತೆ ಇತರೆ ಸೌಲಭ್ಯಗಳೊಂದಿಗೆ ಸ್ಮಾರ್ಟ್ ಗ್ರಾಮವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಮುಖ್ಯಮಂತ್ರಿಗಳು ಕಂದಾಯ ಇಲಾಖೆಗೆ ಸೂಚಿಸಿದರು. ಈ ಕುಟುಂಬಗಳಿಗೆ ಉದ್ಯೋಗ ದೊರೆಯುವಂತೆ ಮಾಡುವ ಮೂಲಕ ಮಹಿಳೆಯರು ಮತ್ತು ಪುರುಷರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು ಎಂದು ಹೇಳಿದರು.

ಹಿಂದಿನ ಸರ್ಕಾರಗಳ ಕಾರ್ಯಗಳನ್ನು ಪ್ರಶ್ನಿಸಿದ ಅವರು, ಹಿಂದಿನ ಸರ್ಕಾರಗಳು ವಂಚಿತ ಸಮುದಾಯಗಳ ಬಗ್ಗೆ ಸಂವೇದನಾಶೀಲರಾಗಿರದೆ ಅವರ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಯೋಗಿಯ ಈ ಕಾರ್ಯಕ್ಕೆ ದೇಶದಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Leave A Reply

Your email address will not be published.